ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿವೆ. ಚುನಾವಣೆಯಲ್ಲಿ ಮತದಾನದ ಕುರಿತಂತೆ ಶಾಕಿಂಗ್ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದಿದ್ದರೆ ಮತದಾರರ ಬ್ಯಾಂಕ್ ಖಾತೆಯಿಂದ 350 ರೂಪಾಯಿ ಕಡಿತಗೊಳಿಸಲಾಗುವುದು ಎಂದು ಈ ವೈರಲ್ ಸುದ್ದಿಯಲ್ಲಿ ಹೇಳಲಾಗಿದೆ.
ಆದರೆ ಈ ಮಾಹಿತಿ ಸಂಪೂರ್ಣ ಸುಳ್ಳು. ಕೇಂದ್ರ ಸರ್ಕಾರದ ಸತ್ಯ ತಪಾಸಣೆ ಘಟಕವಾದ ಪಿಐಬಿ ಫ್ಯಾಕ್ಟ್ ಚೆಕ್ ಇದನ್ನು ಸ್ಪಷ್ಟಪಡಿಸಿದೆ. ವೈರಲ್ ಆಗಿರೋ ಪತ್ರಿಕೆಯ ತುಣುಕು ಹೋಳಿ ಸಂದರ್ಭದಲ್ಲಿ ಪ್ರಕಟವಾದ ಒಂದು ತಮಾಷೆಯ ಸುದ್ದಿಯಾಗಿದೆ. ಆದರೆ ಜನರು ಈ ಸುದ್ದಿಯನ್ನು ನಿಜವೆಂದು ಸ್ವೀಕರಿಸಲು ಪ್ರಾರಂಭಿಸಿದರು. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ.
ವೈರಲ್ ಫೇಕ್ ನ್ಯೂಸ್ನಲ್ಲಿ ಹೇಳಿದ್ದೇನು ?
ಮತದಾನ ಮಾಡದವರನ್ನು ಆಧಾರ್ ಕಾರ್ಡ್ ಮೂಲಕ ಗುರುತಿಸಲಾಗುತ್ತದೆ ಮತ್ತು ಆ ಕಾರ್ಡ್ಗೆ ಲಿಂಕ್ ಮಾಡಿದ ಅವರ ಬ್ಯಾಂಕ್ ಖಾತೆಯಿಂದ 350 ರೂಪಾಯಿಗಳನ್ನು ಕಡಿತಗೊಳಿಸಲಾಗುತ್ತದೆ ಎಂದು ವೈರಲ್ ನ್ಯೂಸ್ನಲ್ಲಿ ತಪ್ಪು ಮಾಹಿತಿ ನೀಡಲಾಗಿದೆ.
ಬ್ಯಾಂಕ್ ಖಾತೆಯಲ್ಲಿ 350 ರೂಪಾಯಿ ಇಲ್ಲದಿದ್ದರೆ ಅಥವಾ ಬ್ಯಾಂಕ್ ಖಾತೆಯೇ ಇಲ್ಲದ ಮತದಾರರು ತಮ್ಮ ಮೊಬೈಲ್ ಫೋನ್ ರೀಚಾರ್ಜ್ ಸಮಯದಲ್ಲಿ ಈ ಹಣವನ್ನು ಕಡಿತಗೊಳಿಸಲಾಗುವುದು ಎಂದು ನಕಲಿ ಸುದ್ದಿಯಲ್ಲಿ ಹೇಳಲಾಗಿದೆ. ಇದಕ್ಕಾಗಿ ಕನಿಷ್ಠ 350 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಇದಕ್ಕಿಂತ ಕಡಿಮೆ ರೀಚಾರ್ಜ್ಗೆ ಅವಕಾಶವಿರುವುದಿಲ್ಲ. ಆಯೋಗವು ಈಗಾಗಲೇ ನ್ಯಾಯಾಲಯದಿಂದ ಅನುಮತಿ ಪಡೆದಿರುವುದರಿಂದ ಆಯೋಗದ ನಿರ್ಧಾರದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದೆಲ್ಲ ಫೇಕ್ ನ್ಯೂಸ್ನಲ್ಲಿ ಬರೆಯಲಾಗಿತ್ತು.
ಈ ಸುದ್ದಿಯನ್ನು ನಾಲ್ಕು ವರ್ಷಗಳ ಹಿಂದೆ ಹೋಳಿ ಹಬ್ಬದಂದು ಪತ್ರಿಕೆಯೊಂದು ಹಾಸ್ಯಮಯವಾಗಿ ಪ್ರಕಟಿಸಿತ್ತು. ಈ ಸುದ್ದಿಯ ಕೆಳಗೆ ಹೋಳಿ ಹಬ್ಬವಾಗಿರೋದ್ರಿಂದ ದುಃಖಿಸಬೇಡಿ ಎಂದು ಸ್ಪಷ್ಟ ಪದಗಳಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲ ‘ಈ ಪೇಜ್ನಲ್ಲಿರುವ ಎಲ್ಲಾ ಸುದ್ದಿಗಳು ಕಾಲ್ಪನಿಕ’ ಎಂದು ಸಹ ಬರೆಯಲಾಗಿದೆ. ಪಿಐಬಿ ಫ್ಯಾಕ್ಟ್ ಚೆಕ್ ಈ ವೈರಲ್ ಕಟಿಂಗ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ ಮತ್ತು ಇದು ಸುಳ್ಳು ಸುದ್ದಿ ಎಂದು ಹೇಳಿದೆ.