
ನವದೆಹಲಿ: ಅಗ್ನಿಪಥ್ ಯೋಜನೆ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ 35 ವಾಟ್ಸಾಪ್ ಗುಂಪುಗಳನ್ನು ಗೃಹ ಸಚಿವಾಲಯ ಭಾನುವಾರ ನಿಷೇಧಿಸಿದೆ.
ದಾರಿತಪ್ಪಿಸುವ ಮಾಹಿತಿ ಹರಡಿದ ಮತ್ತು ಪ್ರತಿಭಟನೆಗಳನ್ನು ಆಯೋಜಿಸಿದ್ದಕ್ಕಾಗಿ 10 ಜನರನ್ನು ಬಂಧಿಸಲಾಗಿದೆ. 35 ವಾಟ್ಸಾಪ್ ಗ್ರೂಪ್ ಗಳಲ್ಲಿ ಅಗ್ನಿವೀರ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನಲೆಯಲ್ಲಿ ಸರ್ಕಾರ ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆ ಘೋಷಣೆಯಾದಾಗಿನಿಂದ ದೇಶದ ವಿವಿಧ ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ. ಅಗ್ನಿಪಥ್ ಯೋಜನೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಸರ್ಕಾರವು 35 ವಾಟ್ಸಾಪ್ ಗುಂಪುಗಳನ್ನು ನಿಷೇಧಿಸಿದೆ. ಈ ಗುಂಪುಗಳ ಬಗ್ಗೆ ಮಾಹಿತಿ ಅಥವಾ ಅವುಗಳ ನಿರ್ವಾಹಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂದು ತಿಳಿಸಲಾಗಿಲ್ಲ.
ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಅವರು ಯೋಜನೆಯನ್ನು ಜಾರಿಗೊಳಿಸುವುದರಿಂದ ಹಿಂತಿರುಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.