ಬೆಂಗಳೂರು: ಜುಲೈ 8ರ ರಾಷ್ಟ್ರೀಯ ಲೋಕ ಅದಾಲತ್ ಮೂಲಕ 34.76 ಲಕ್ಷ ಕೇಸ್ ಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಜಿ. ನರೇಂದರ್ ಮತ್ತು ಕೆ. ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2.5 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ. 32.25 ಲಕ್ಷ ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟು 1191 ಕೋಟಿ ರೂಪಾಯಿ ಮೊತ್ತದೊಂದಿಗೆ ಕೇಸ್ ಗಳನ್ನು ಇತ್ಯರ್ಥ ಪಡಿಸಲಾಗಿದೆ. 1874 ವೈವಾಹಿಕ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಸಂಧಾನದ ಮೂಲಕ 243 ದಂಪತಿಯನ್ನು ಒಟ್ಟುಗೂಡಿಸಲಾಗಿದೆ.
3844 ವಿಭಾಗ ದಾವೆ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. 5007 ಅಪಘಾತ ಪ್ರಕರಣಗಳಲ್ಲಿ 224 ಕೋಟಿ ರೂ. ಪರಿಹಾರ ನೀಡಲಾಗಿದೆ. 11,982 ಚೆಕ್ ಬೌನ್ಸ್ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. 98 ರೇರಾ, 180 ಗ್ರಾಹಕರ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗಿದೆ.
ಅಪಘಾತ ಪ್ರಕರಣ ಒಂದರಲ್ಲಿ 1.15 ಕೋಟಿ ರೂ. ಪರಿಹಾರಕ್ಕೆ ಆದೇಶಿಸಲಾಗಿದೆ. 74 ವರ್ಷದ ವೃದ್ದೆ ಆಂಬುಲೆನ್ಸ್ ನಲ್ಲಿ ಬಂದು ವಿಭಾಗ ವ್ಯಾಜ್ಯ ಇತ್ಯರ್ಥ ಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ 63 ವರ್ಷದ ಹಳೆಯ ಸಿವಿಲ್ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಹೊಸದುರ್ಗ ಕೋರ್ಟ್ ನಲ್ಲಿ 13 ವರ್ಷದ ವಿಚ್ಛೇದನಕ್ಕೆ ಇತ್ಯರ್ಥ ಗೊಳಿಸಲಾಗಿದೆ.