ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಫಿಲಿಭಿತ್ನ ಚುನಾವಣಾ ನಿಯಂತ್ರಣ ಕೊಠಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಣ್ಗಾವಲಿಗೆಂದು ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಆದರೆ ಬರೋಬ್ಬರಿ 34 ಸಿಸಿ ಟಿವಿ ಕ್ಯಾಮರಾಗಳನ್ನು ಧ್ವಂಸಗೊಳಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಬಹುಶಃ ಇದು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ಕಾರ್ಯಕರ್ತರ ಕೆಲಸ ಎಂದು ಚುನಾವಣಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಸಾಕಷ್ಟು ತನಿಖೆಯ ಬಳಿಕ ಇದು ಮಾನವ ಕೃತ್ಯವಲ್ಲ ಎಂದು ತಿಳಿದುಬಂದಿದೆ. ಅಸಲಿಗೆ ಇದು ಕೋತಿಗಳ ಕೆಲಸ ಎಂದು ತಿಳಿಯುತ್ತಿದ್ದಂತೆಯೇ ಚುನಾವಣಾಧಿಕಾರಿಗಳು ಶಾಕ್ ಆಗಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಜಿಲ್ಲಾಧಿಕಾರಿ ಆರ್ ಎಸ್ ಗೌತಮ್, ನಾವು 52 ಸಾವಿರ ಹೊಸ ಕ್ಯಾಮರಾಗಳನ್ನು ಅಳವಡಿಸಿದ್ದೆವು. ಪ್ರತಿಯೊಂದು ಕ್ಯಾಮರಾದ ಬೆಲೆಯು 2500 ರೂಪಾಯಿ ಆಗಿತ್ತು. ಅಲ್ಲದೇ ಸ್ಟ್ರಾಂಗ್ ರೂಮ್ನಲ್ಲಿ ಎವಿಎಂ ಹಾಗೂ ವಿವಿ ಪ್ಯಾಟ್ ಮಷಿನ್ಗಳನ್ನು ಇರಿಸಿದ್ದೆವು. ಕನಿಷ್ಟ 34 ಕ್ಯಾಮರಾಗಳು ಹಾನಿಗೊಳಗಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆಯು ಈಗಾಗಲೇ 9 ಮಂದಿ ಸದಸ್ಯರಿರುವ ಮೂರು ತಂಡಗಳನ್ನು ರಚಿಸಿದ್ದು ಈಗಾಗಲೇ ಏಳು ಕೋತಿಗಳನ್ನು ಸೆರೆಹಿಡಿಯಲಾಗಿದೆ. ಸೆರೆ ಹಿಡಿದ ಎಲ್ಲಾ ಕೋತಿಗಳನ್ನು ಕಾಡಿನಲ್ಲಿ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಮಾಹಿತಿ ನೀಡಿದರು.