ಬಳ್ಳಾರಿ : ರಾಜ್ಯದಲ್ಲಿ ಈ ಬಾರಿ ರೂ.200 ಕೋಟಿ ವೆಚ್ಚದಲ್ಲಿ 32000 ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು. ಟೈ ಲ್ಯಾಂಡ್‍ಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಿ, ಅಲ್ಲದೆ ಇಂತಹ ಪ್ರದೇಶಗಳ ರೈತರಿಗೂ ಬೆಳೆ ಪರಿಹಾರ ಒದಗಿಸಲು ಇರುವ ತೊಡಕು ಬಗೆಹರಿಸಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಳ್ಳಾರಿ, ವಿಜಯನಗರ ಜಿಲ್ಲೆಗಳ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಹಣ ಪಾವತಿಯಾಗುತ್ತಿದೆ ರಾಜ್ಯದ ಪಾಲು ಕೇವಲ 30 ಸಾವಿರ ಕೋಟಿ ಬರುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಬರ ಪರಿಹಾರ ನಮ್ಮ ಹಕ್ಕು, ನ್ಯಾಯ ಸಮ್ಮತವಾಗಿ ನೀಡಬೇಕಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು
ಕೇಂದ್ರ ಸರ್ಕಾರ ಬರ ಪರಿಹಾರ ಅನುದಾನ ಶೀಘ್ರದಲ್ಲೇ ಒದಗಿಸುವ ನಿರೀಕ್ಷೆ ಇದೆ, ಕೇಂದ್ರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರ ಕುಡಿಯುವ ನೀರು, ಮೇವಿನ ನಿರ್ವಹಣೆಗೆ ಈಗಾಗಲೆ ಹಣ ಬಿಡುಗಡೆ ಮಾಡಿದೆ ಹಾಗೇ ರೈತರ ಹಿತವನ್ನು ಕಾಯಲಾಗುತ್ತದೆ ಎಂದರು.
ಪ್ರಿವೆಂಟಿವ್ ಸೋಯಿಂಗ್ ಇನ್ವೋಕ್ ಹಾಗೂ ಮಧ್ಯಂತರ ಬೆಳೆ ಹಾನಿ ಪರಿಹಾರಕ್ಕೆ ಈಗಾಗಲೇ 343 ಕೊಟಿ ಬಿಡುಗಡೆಯಾಗಿದೆ. ಅದೇ ರೀತಿ ಶೀಘ್ರ ಬರ ಪರಿಹಾರ ಹಣ ಕೂಡ ರೈತರ ಖಾತೆಗೆ ನೇರವಾಗಿ ಸೇರಲಿದೆ ಅದಕ್ಕೆ ಪೂರಕವಾಗಿ ಶೇ.100ರಷ್ಟು ರೈತರ ವಿವರ ಫ್ರೂಟ್ಸ್ ಐಡಿಗೆ ದಾಖಲಿಸುವ, ಕೆ.ವೈ.ಸಿ ನೊಂದಾಯಿಸುವ ಕಾರ್ಯ ಅಭಿಯಾನದ ಸ್ವರೂಪದಲ್ಲಿ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ಮೂಲಕ 1.43 ಕೊಟಿ ರೈತರಿಗೆ ಒಟ್ಟಾರೆ 5388 ಕೊಟಿ ರೂ. ಸೌಲಭ್ಯ ತಲುಪಿದಂತಾಗುತ್ತದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಮೂಲ 75 ಸಾವಿರ ಕೋಟಿ ಆರ್ಥಿಕ ನೆರವು ರಾಜ್ಯದ ಜನ ಸಾಮಾನ್ಯರಿಗೆ ನೇರವಾಗಿ ತಲುಪುತ್ತಿದೆ, ಇದು ಸಾಮಾಜಿಕ ಸಬಲೀಕರಣ ಸರ್ಕಾರದ ಮೂಲ ಆಶಯ ಎಂದರು.
ಸೂಕ್ಷ್ಮ ನೀರಾವರಿ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೇ.90 ಸಹಾಯಧನದಲ್ಲಿ ಹನಿ ನೀರಾವರಿ ಅಥವಾ ಸ್ಪಿಂಕ್ಲೇರ್ ಸಾಧನ ವಿತರಿಸಲಾಗುತ್ತಿದ್ದು, ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಮಂಜೂರು ಮಾಡಲಾಗುವುದು. ಈಗಾಗಲೇ ಎಲ್ಲಾ ಅರ್ಹರಿಗೆ ಎಸ್‍ಎಂಎಸ್ ರವಾನಿಸಲಾಗಿದೆ ಎಂದರು.