ಈ ಬಾರಿ ರಾಜ್ಯದಲ್ಲಿ ವ್ಯಾಪಕ ಮಳೆಯಾಗಿದ್ದು, ಹಳ್ಳ ಕೊಳ್ಳಗಳು, ಕೆರೆ ನದಿಗಳು, ಜಲಾಶಯಗಳು ಈಗಾಗಲೇ ತುಂಬಿ ಹರಿಯುತ್ತಿವೆ. ಮುಂಗಾರು ಆರಂಭದಲ್ಲಿ ಕಡಿಮೆ ಮಳೆಯಾಗಿದ್ದರೂ ಬಳಿಕ ವರುಣ ಆರ್ಭಟಿಸಿದ ಪರಿಣಾಮ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗಿದೆ.
ಇದರ ಮಧ್ಯೆ ತಮಿಳುನಾಡಿಗೆ ಕಾವೇರಿ ನ್ಯಾಯಾಧಿಕರಣ ಹಂಚಿಕೆ ಮಾಡಿದ್ದಕ್ಕಿಂತ ಮೂರು ಪಟ್ಟು ಅಧಿಕ ನೀರು ಈಗಾಗಲೇ ಹರಿದುಹೋಗಿದೆ ಎಂದು ಹೇಳಲಾಗಿದೆ. ವಿಧಾನ ಪರಿಷತ್ ನಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ಕುರಿತು ಮಾಹಿತಿ ನೀಡಿದ್ದಾರೆ.
ತೀರ್ಪಿನ ಪ್ರಕಾರ ತಮಿಳುನಾಡಿಗೆ 117.5 ಟಿಎಂಸಿ ನೀರು ಬಿಡಬೇಕಾಗಿದ್ದು, ಆದರೆ ಜೂನ್ ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಒಟ್ಟಾರೆ 416.65 ಟಿಎಂಸಿ ನೀರು ಹರಿದು ಹೋಗಿದೆ ಎಂದು ಅವರು, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.