ಭಾರತದಲ್ಲಿ 315 ಮಿಲಿಯನ್ ( 31 ಕೋಟಿ, 50 ಲಕ್ಷ ) ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಮತ್ತು 101 ಮಿಲಿಯನ್ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಲ್ಯಾನ್ಸೆಟ್ ಡಯಾಬಿಟಿಸ್ ಅಂಡ್ ಎಂಡೋಕ್ರೈನಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ದ ಅಧ್ಯಯನ ವರದಿ ಹೇಳಿದೆ.
136 ಮಿಲಿಯನ್ ಭಾರತೀಯರು ಪ್ರಿ-ಡಯಾಬಿಟಿಕ್ ಆಗಿದ್ದು, 213 ಮಿಲಿಯನ್ ಜನರು ಅಧಿಕ ಕೊಲೆಸ್ಟ್ರಾಲ್ ಹೊಂದಿದ್ದಾರೆ. 185 ಮಿಲಿಯನ್ ಜನರು ಅಧಿಕ ಎಲ್‌ಡಿಎಲ್ ಕೊಲೆಸ್ಟ್ರಾಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದಾರೆ. 254 ಮಿಲಿಯನ್ ಜನರು ಸಾಮಾನ್ಯ ಬೊಜ್ಜು ಮತ್ತು 351 ಮಿಲಿಯನ್ ಜನರು ಹೊಟ್ಟೆಯ ಬೊಜ್ಜು ಹೊಂದಿದ್ದಾರೆ ಎಂದು ಅಧ್ಯಯನವು ಹೇಳಿದೆ.
ICMR-India Diabetes (ICMR-INDIAB) ಅಧ್ಯಯನವು 1,13,043 ಜನರ ಸಮೀಕ್ಷೆಯನ್ನು ಆಧರಿಸಿದೆ. 33,537 ನಗರ ಮತ್ತು 79,506 ಗ್ರಾಮೀಣ ಪ್ರದೇಶದ ಜನರನ್ನ ಅಧ್ಯಯನ ಮಾಡಲಾಗಿತ್ತು. 20 ವರ್ಷದವರಿಂದ ಹಿಡಿದು ವೃದ್ಧರವರೆಗೆ 2008 ಮತ್ತು 2020 ರ ನಡುವೆ ಈ ಸಮೀಕ್ಷಾ ಅಧ್ಯಯನ ನಡೆಸಲಾಗಿದೆ. 31 ರಾಜ್ಯಗಳಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರನ್ನು ಒಳಗೊಂಡಂತೆ , ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತದ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಅಧ್ಯಯನ ಸಮೀಕ್ಷೆ ನಡೆಸಲಾಗಿದೆ.
ಪ್ರಿಡಯಾಬಿಟಿಸ್ ಹೊರತುಪಡಿಸಿ ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಡಿಸ್ಲಿಪಿಡೆಮಿಯಾ ಮುಂತಾದ ಎಲ್ಲಾ ಚಯಾಪಚಯ NCD ಗಳು ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕಡಿಮೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿರುವ ಅನೇಕ ರಾಜ್ಯಗಳಲ್ಲಿ, ಮಧುಮೇಹ ಮತ್ತು ಪ್ರಿಡಿಯಾಬಿಟಿಸ್ ಅನುಪಾತವು ಒಂದಕ್ಕಿಂತ ಕಡಿಮೆಯಾಗಿದೆ.
ಇದಲ್ಲದೆ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳ, ಪುದುಚೇರಿ, ಗೋವಾ, ಸಿಕ್ಕಿಂ ಮತ್ತು ಪಂಜಾಬ್‌ನಂತಹ ಕೆಲವು ರಾಜ್ಯಗಳು ಎನ್‌ಸಿಡಿಗಳ ಹೆಚ್ಚಿನ ಹರಡುವಿಕೆಯನ್ನು ಹೊಂದಿವೆ ಎಂದು ಅಧ್ಯಯನವು ತೋರಿಸಿದೆ.
ಮಧುಮೇಹದ ಹರಡುವಿಕೆಯು ನಿರ್ದಿಷ್ಟವಾಗಿ ಭಾರತದ ದಕ್ಷಿಣ ಮತ್ತು ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ಕಂಡುಬಂದಿದೆ.ಅಧಿಕ ರಕ್ತದೊತ್ತಡವು ನಗರ ಪ್ರದೇಶಗಳಲ್ಲಿ ಮತ್ತು ಮಧ್ಯ ಭಾರತವನ್ನು ಹೊರತುಪಡಿಸಿ ದೇಶದಾದ್ಯಂತ ಹೆಚ್ಚು ಪ್ರಚಲಿತವಾಗಿದೆ.