ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲೆಂದು ಕೆಲವರು ಸೋಷಿಯಲ್ ಮೀಡಿಯಾಗಳನ್ನು ಹೇಗೆಲ್ಲ ಬಳಸಿಕೊಂಡು ಮಂಕುಬೂದಿಯೆರಚುತ್ತಾರೆ ನೋಡಿ. ಕೆಲ ದಿನಗಳ ಹಿಂದಷ್ಟೇ 31 ವರ್ಷದ ಮಹಿಳೆ 24 ಮಕ್ಕಳನ್ನು ಹೆತ್ತ ಸ್ಟೋರಿ ಭಾರಿ ವೈರಲ್ ಆಗಿತ್ತು. 21 ವರ್ಷದ ದಾಂಪತ್ಯದಲ್ಲಿ 24 ಮಕ್ಕಳನ್ನು ಹೆತ್ತಿದ್ದಾಗಿ ಮಹಾತಾಯಿಯೊಬ್ಬಳು ಹೇಳಿಕೆ ನೀಡಿದ್ದಳು. ಮಹಿಳೆಯ ಕಥೆ ಕೇಳಿ ಅಚ್ಚರಿಯೆನಿಸಿದರೂ ಹಲವರು ಇರಬಹುದೇನೋ ಎಂದೂ ನಂಬಿದ್ದರು. ಆದರೆ ಆಕೆಯನ್ನು ಭೇಟಿಯಾಗಿ, ಆಕೆಯ ಕುಟುಂಬದ ಬಗ್ಗೆ ವರದಿಗೆ ತೆರಳಿದಾಗ ಮಾಧ್ಯಮಗಳ ಮುಂದೆ ಮಹಿಳೆಯ ಕಟ್ಟು ಕಥೆ ಬಯಲಾಗಿದೆ.
ಉತ್ತರಪ್ರದೇಶದ ಅಂಬೇಡ್ಕರ್ ನಗರ ನಿವಾಸಿ ಖುಷ್ಬೂ ಪಾಠಕ್ ಎಂಬ ಮಹಿಳೆ ತನಗೆ 31 ವರ್ಷ 24 ಜನ ಮಕ್ಕಳಿದ್ದಾರೆ. ಬಡತನದಲ್ಲಿರುವ ನಾವು ಪ್ರಧಾನಿ ಮೋದಿಯವರು ನೀಡುವ ರೇಷನ್ ನಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ಹೇಳಿದ್ದಳು. 24 ಜನ ಮಕ್ಕಳಿರುವ ಮಹಾತಾಯಿ ಕಥೆ ಕೇಳಲು ಹೋದ ಯೂಟ್ಯೂಬ್ ಚಾನಲ್, ಹಲವು ಮಾಧ್ಯಮಗಳಿಗೂ ಮಹಿಳೆ ಇದೇ ಕಥೆ ಹೇಳಿ ಕಳುಹಿಸಿದ್ದಾಳೆ. ಸತ್ಯದ ತಲೆ ಮೇಲೆ ಹೊಡೆದಂತೆ ಕಥೆ ಮೇಲೆ ಕಥೆ ಕಟ್ಟಿ ಸೋಷಿಯಲ್ ಮೀಡಿಯಾಗಳಲ್ಲಿ ಜನಪ್ರಿಯತೆಯನ್ನೇ ಗಿಟ್ಟಿಸಿಕೊಂಡಿದ್ದಾಳೆ.
ಆನ್ ಲೈನ್ ಮನರಂಜನಾ ವಿಡಿಯೋ ಮಾಡುವಾಗ ತನಗೆ 24 ಜನ ಮಕ್ಕಳು ಎಂದು ಹೇಳಿದ್ದಕ್ಕೆ ಆ ವಿಡಿಯೋ ಭಾರಿ ವೈರಲ್ ಆಗಿತ್ತು. ಹಾಗಾಗಿ ಅದೇ ಕಥೆಯನ್ನೇ ಮಹಿಳೆ ಮತ್ತೆ ಮತ್ತೆ ಹೇಳುತ್ತಾ ಸುದ್ದಿಯಾಗಿದ್ದಾಳಂತೆ. ನನಗೆ 16 ಜನ ಗಂಡು ಮಕ್ಕಳು, 8 ಜನ ಹೆಣ್ಣು ಮಕ್ಕಳಿದ್ದಾರೆ. ನಾವಿಬ್ಬರು ನಮಗೆ 2 ಡಜನ್ ಮಕ್ಕಳು ಎಂದು ಬಣ್ಣಬಣ್ಣದ ಸ್ಟೋರಿ ಹೇಳಿದ್ದಾಳೆ.
ಮಹಿಳೆಯ ವಿಡಿಯೋ ಚರ್ಚೆಗೆ ಕಾರಣವಾಗುತ್ತಿದ್ದಂತೆ ಸುದ್ದಿ ಮಾಧ್ಯಮಗಳು ಆಕೆಯನ್ನು ಭೇಟಿಯಾಗಿ, ಕುಟುಂಬ ಹಾಗೂ ಮಕ್ಕಳ ಬಗ್ಗೆ ವಿಚಾರಿಸಿವೆ. ಮಕ್ಕಳ ಹೆಸರು ಹೇಳುವಂತೆ ಕೇಳಿದರೆ ಮಹಿಳೆ, ನಾನು ಮಕ್ಕಳಿಗೆ ಹೆಸರಿಟ್ಟಿದ್ದರು ಅವರ ಹೆಸರು ಹೇಳಿ ಕರೆಯಲ್ಲ, 1, 2, 3, 4… ಹೀಗೆ ಸಂಖ್ಯೆ ಕರೆಯುತ್ತೇನೆ ಎಂದಿದ್ದಾಳೆ. ಹಿರಿಯ ಮಗನಿಗೆ 18 ವರ್ಷ ಎರಡು ವರ್ಷದ ಕಿರಿಯ ಮಗಳಿದ್ದಾಳೆ. ಅವಳಿಜವಳಿ ಮಕ್ಕಳೂ ಇದ್ದಾರೆ ಎಂದಿದ್ದಾಳೆ. ಸಧ್ಯಕ್ಕೆ ಮಕ್ಕಳು ಮನೆಯಲ್ಲಿಲ್ಲ ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇಬ್ಬರು ಮಕ್ಕಳು ಮಾತ್ರ ಮನೆಯಲ್ಲಿದ್ದಾರೆ ಎಂದು ವಿವರಿಸಿದ್ದಾಳೆ.
ಮಹಿಳೆಯ ಹೇಳಿಕೆ ಬಗ್ಗೆ ಅನುಮಾನಗೊಂಡು ರೇಷನ್ ಕಾರ್ಡ್, ಇತರ ದಾಖಲೆ ಪರಿಶೀಲಿಸಿದಾಗ ಮಹಿಳೆಯ ಕುಟುಂಬದಲ್ಲಿ ಇರುವವರು ಕೇವಲ ನಾಲ್ವರು. ಮಹಿಳೆ ಹಾಗೂ ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ಎಂಬುದು ತಿಳಿದುಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂದು ಮಹಿಳೆ ತನಗೆ ಇಬ್ಬರು ಮಕ್ಕಳಿದ್ದರೂ 24 ಮಕ್ಕಳು ಎಂದು ಹೇಳಿ ನಾಟಕವಾಡಿ ಸುದ್ದಿಯಾಗಿದ್ದು ಮಾತ್ರ ವಿಪರ್ಯಾಸ.