ಪೂರ್ವ ಆಫ್ರಿಕಾದಲ್ಲಿ ಮೊಸಳೆಯೊಂದು ಈವರೆಗೆ 300 ಜನರನ್ನು ಬಲಿ ಪಡೆದಿದೆ. ದೈತ್ಯ ನರಭಕ್ಷಕ ಮೊಸಳೆಯ ಹೆಸರು ಗುಸ್ಟಾವ್. ಇಪ್ಪತ್ತು ಅಡಿ ಉದ್ದದ ಈ ಮೊಸಳೆ ಪೂರ್ವ ಆಫ್ರಿಕಾದ ಬುರುಂಡಿಯ ತಂಗನಿಕಾ ಸರೋವರದಲ್ಲಿತ್ತು. ಮೊಸಳೆಯ ವಯಸ್ಸು ನಿಖರವಾಗಿ ಗೊತ್ತಿಲ್ಲ, 100 ವರ್ಷ ದಾಟಿರಬಹುದು ಅನ್ನೋದು ತಜ್ಞರ ಅಂದಾಜು.
ಈ ಮೊಸಳೆ ಇನ್ನೂ ಜೀವಂತವಾಗಿದೆ ಮತ್ತು ಹೊಸ ಬೇಟೆಯನ್ನು ಹುಡುಕುತ್ತಿದೆಯಂತೆ. ಯಾಕಂದ್ರೆ ಅದು ಸತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅನೇಕ ಜನರು ದೈತ್ಯ ಮೊಸಳೆಯನ್ನು ಕೊಲ್ಲಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಮೊಸಳೆಯ ಹಲ್ಲುಗಳು ಇನ್ನೂ ಗಟ್ಟಿಮುಟ್ಟಾಗಿರುವುದರಿಂದ ಅದಕ್ಕಿನ್ನೂ 60 ವರ್ಷವಿರಬಹುದೆಂದು ಸ್ಥಳೀಯರು ಹೇಳ್ತಾರೆ. ಗುಸ್ತಾವ್ ಮೊಸಳೆಯ ತೂಕ ಎಷ್ಟಿದೆ ಅನ್ನೋದು ಗೊತ್ತಿಲ್ಲ. ಅಂದಾಜು 2000 ಪೌಂಡ್‌ಗಳಿಗಿಂತಲೂ ಹೆಚ್ಚು ಅಂತಾ ಹೇಳಲಾಗುತ್ತದೆ. ಅಂದರೆ ಸುಮಾರು 910 ಕೆಜಿ.
ಈ ದೈತ್ಯ ಮೊಸಳೆ ಮನುಷ್ಯರ ಮೇಲೆ ನಿರಂತರವಾಗಿ ದಾಳಿ ನಡೆಸಿದೆ. ಅನೇಕ ಆದಿವಾಸಿಗಳನ್ನು ಬಲಿ ಪಡೆದಿದೆ. ಹಾಗಾಗಿಯೇ ಅದನ್ನು ಸೀರಿಯಲ್ ಕಿಲ್ಲರ್ ಎಂದೇ ಕರೆಯಲಾಗುತ್ತದೆ. ಸುಮಾರು 300 ಮಂದಿ ಮೊಸಳೆ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಮೊಸಳೆಯನ್ನು ಗುಂಡು ಹೊಡೆದು ಕೊಲ್ಲುವ ಯತ್ನ ಕೂಡ ವಿಫಲವಾಗಿತ್ತು. ಮೊಸಳೆ ಸೆರೆಹಿಡಿಯುವ ಕಾರ್ಯಾಚರಣೆ ಕುರಿತಾದ ಸಾಕ್ಷ್ಯಚಿತ್ರ ಕೂಡ 2004ರಲ್ಲಿ ಬಂದಿತ್ತು. ಅದೆಷ್ಟೇ ಬಾರಿ ಪ್ರಯತ್ನಿಸಿದ್ರೂ ಮೊಸಳೆ ಸೆರೆಸಿಕ್ಕಿರಲಿಲ್ಲ.
ಲೈವ್ ಬೆಟ್ ಮತ್ತು ಇನ್ಫ್ರಾರೆಡ್ ಕ್ಯಾಮೆರಾವನ್ನು ಬಳಸಿಕೊಂಡು ದೊಡ್ಡ ಬಲೆಯಲ್ಲಿ ಮೊಸಳೆಯನ್ನು ಹಿಡಿಯಲು ಪ್ರಯತ್ನಿಸಲಾಯ್ತು. ಜೀವಂತ ಕೋಳಿಯನ್ನು ಪಂಜರದೊಳಗೆ ನೇತುಹಾಕಿ ಮೊಸಳೆಯನ್ನು ಆಹ್ವಾನಿಸುವ ಯತ್ನ ನಡೀತು. ನಂತರ ಜೀವಂತ ಮೇಕೆಯನ್ನು ಬಳಸಿಕೊಂಡರೂ ಮೊಸಳೆ ಮಾತ್ರ ಬಲೆಗೆ ಸಿಲುಕಲಿಲ್ಲ. 2019ರಲ್ಲಿ ಮೊಸಳೆ ಸತ್ತಿದೆ ಅಂತಾ ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಸ್ಥಳೀಯರಲ್ಲಿ ಭಯ ಈಗಲೂ ಇದೆ.