ದೇಶಾದ್ಯಂತ ದೇಶದ್ರೋಹ ಕಾಯ್ದೆಯಡಿ ದಾಖಲಾಗಿರೋ ಎಲ್ಲ ಪ್ರಕರಣಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಸದ್ಯಕ್ಕೆ ತಡೆ ಹಿಡಿದಿದೆ. ಕಳೆದ 5 ವರ್ಷಗಳಲ್ಲಿ ದಾಖಲಾದ 300ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ಈಗ ತಾತ್ಕಾಲಿಕ ಸ್ಥಗಿತಗೊಂಡಿದೆ.
2015-2020 ಈ 5 ವರ್ಷದಲ್ಲಿ ದೇಶಾದ್ಯಂತ ದೇಶದ್ರೋಹ ಕಾಯಿದೆ ಕಾನೂನಿನಡಿಯಲ್ಲಿ ದೇಶದಲ್ಲಿ ಒಟ್ಟು 356 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ 6 ಜನರಿಗೆ ಮೇಲಿನ ಆರೋಪ ಸಾಬೀತಾಗಿ ಶಿಕ್ಷೆಗೆ ಒಳಪಡಿಸಲಾಗಿದೆ. ಒಂದು ಮಾಹಿತಿ ಪ್ರಕಾರ ಅಸ್ಸಾಂನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಜಾರ್ಖಂಡ್ 40, ಹರ್ಯಾಣಾದಲ್ಲಿ 31 ಪ್ರಕರಣಗಳು ದಾಖಲಾಗಿವೆ.
ದಾಖಲಾಗಿರುವ ಎಲ್ಲ ಪ್ರಕರಣಗಳಲ್ಲಿ 141 ಪ್ರಕರಣಗಳಲ್ಲಿ ಮಾತ್ರ ದೋಷಾರೋಪಣೆ ಸಲ್ಲಿಕೆಯಾಗಿದೆ. ಅದರಲ್ಲಿ 6 ಜನರಿಗೆ ಮಾತ್ರ 6 ವರ್ಷಗಳ ಕಾಲ ಶಿಕ್ಷೆ ವಿಧಿಸಲಾಗಿದೆ ಎಂದು ಕೇಂದ್ರ, ಸುಪ್ರೀಂ ಮುಂದೆ ಅಂಕಿಅಂಶಗಳನ್ನ ಇಟ್ಟಿದೆ. ಅಸ್ಸಾಂನಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ 26 ಪ್ರಕರಣಗಳಲ್ಲಿ ದೋಷಾರೋಪಣೆ ಸಲ್ಲಿಕೆಯಾಗಿದ್ದು, 25 ಪ್ರಕರಣಗಳಲ್ಲಿ ನ್ಯಾಯಾಂಗ ವಿಚಾರಣೆ ಅಂತ್ಯವಾಗಿದೆ. ಇನ್ನೂ ಕರ್ನಾಟಕದಲ್ಲಿ 22 ಪ್ರಕರಣಗಳು ದಾಖಲಾಗಿದ್ದು, 17 ಪ್ರಕರಣಗಳಲ್ಲಿ ದೋಷಾರೋಪಣೆ ಸಲ್ಲಿಕೆಯಾಗಿದೆ. ಇದರಲ್ಲಿ ಕೇವಲ 1 ಪ್ರಕರಣ ಮಾತ್ರ ನ್ಯಾಯಾಂಗ ವಿಚಾರಣೆಯಾಗಿದೆ.
ಜಮ್ಮುಕಾಶ್ಮೀರ, ಬಿಹಾರ್ ಹಾಗೂ ಕೇರಳದಲ್ಲಿ 25 ಪ್ರಕರಣ ರಿಜಿಸ್ಟರ್ ಆಗಿದೆ. ಅದೇ ರೀತಿ ಮೇಘಾಲಯ, ಮಿಜೋರಾಂ, ತ್ರಿಪುರಾ, ಸಿಕ್ಕಿಂ, ಅಂಡಮಾನ್ ನಿಕೋಬಾರ್, ಲಕ್ಷದ್ವೀಪ, ಪುದುಚೆರಿ, ದಿಯು ದಾಮನ್ ಮತ್ತು ಚಂಡಿಗಢಗಳಲ್ಲಿ ಯಾವುದೇ ಒಂದು ಪ್ರಕರಣ ಕೂಡಾ ದಾಖಲಾಗಿಲ್ಲ.
ಬ್ರಿಟಿಷ್ ಕಾಲದ ಕಾಯ್ದೆಯಾಗಿರೋ ಈ ದೇಶದ್ರೋಹ ಕಾಯ್ದೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ತಡೆ ನೀಡಿದೆ. ಈಗಾಗಲೇ ಅನೇಕರ ಮೇಲೆ ದಾಖಲಾಗಿರೋ ದೇಶದ್ರೋಹ ಪ್ರಕರಣ ವಿಚಾರಣೆ ಸದ್ಯಕ್ಕೆ ತಡೆ ನೀಡಬೇಕು ಹಾಗೂ ಮುಂದಿನ ಆದೇಶದವರೆಗೆ ದೇಶದ್ರೋಹದ ಕಾಯ್ದೆಯಡಿ ಹೊಸ ಎಫ್ಐಆರ್ ದಾಖಲಿಸಕೂಡದು ಅಂತ ಸಹ ಸುಪ್ರೀಂ ಆದೇಶ ಹೊರಡಿಸಿದೆ.