ಹರಿಯಾಣದ ಸೋನಿಪತ್‌ನಲ್ಲಿರುವ ಕಾರ್ಖಾನೆಯೊಂದರಲ್ಲಿ ತಾಮ್ರದ ಅವಶೇಷಗಳ ಕರಗುವಿಕೆಯಿಂದ ಉಂಟಾದ ಹೊಗೆಯನ್ನು ಸೇವಿಸಿ, 30 ಮಹಿಳಾ ಉದ್ಯೋಗಿಗಳು ಅಸ್ವಸ್ಥರಾಗಿದ್ದಾರೆ.
ಸೋನಿಪತ್‌ನ ಪಂಚಿ ಗುಜ್ರಾನ್ ಗ್ರಾಮದ ಬಳಿ ಇರುವ ಹುಂಡೈ ಮೆಟಲ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಿಷಕಾರಿ ಹೊಗೆಯನ್ನು ಉಸಿರಾಡಿದ ಕಾರಣ 30 ಮಹಿಳಾ ಉದ್ಯೋಗಿಗಳು ಮೂರ್ಛೆ ಹೋಗಿದ್ದಾರೆ.
ಘಟನೆ ಸಂಭವಿಸಿದಾಗ ಅವರು ಸ್ಕ್ರ್ಯಾಪ್ ಕರಗುವ ಕುಲುಮೆಯ ಬಳಿ ವಿಂಗಡಣೆ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಸದ್ಯ ಅಸ್ವಸ್ಥ ನೌಕರರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಮತ್ತು ಕೆಲವರನ್ನ ಗಣವೂರದ ಸಿಎಚ್‌ಸಿಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ. ಇಬ್ಬರು ಮಹಿಳಾ ಉದ್ಯೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಖಾನ್‌ಪುರ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು, ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಮಹಿಳೆಯರ ಆರೋಗ್ಯದ ಸ್ಥಿತಿ ವಿಚಾರಿಸಿದ್ದಾರೆ. ಈ ನಡುವೆ ಗಣವೂರ ಠಾಣೆ ಪೊಲೀಸರು ಘಟನೆಯ ಬಗ್ಗೆ ತನಿಖೆನಡೆಸುತ್ತಿದ್ದಾರೆ.