ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್ ಡೋಸ್ ನೀಡಲು ಆರಂಭಿಸಲಾಗಿದೆ. ಅಲ್ಲದೆ 12 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಸೂಚನೆ ನೀಡಲಾಗಿದ್ದು, ಹೀಗಾಗಿ ಶಾಲೆಗಳಲ್ಲೂ ಸಹ ಲಸಿಕೆ ನೀಡಲಾಗುತ್ತಿದೆ.
ಇದರ ಮಧ್ಯೆ ಮಧ್ಯಪ್ರದೇಶದಲ್ಲಿ ಬುಧವಾರದಂದು ಆಘಾತಕಾರಿ ಘಟನೆಯೊಂದು ನಡೆದಿದ್ದು, ರಾಜ್ಯ ರಾಜಧಾನಿ ಭೋಪಾಲ್ ಸಮೀಪದಲ್ಲಿರುವ ಸಾಗರ್ ಜಿಲ್ಲೆಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಲು ಒಂದೇ ಸಿರಿಂಜ್ ಅನ್ನು ಬಳಸಲಾಗಿದೆ.
ಬುಧವಾರದಂದು ಸಾಗರ್ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಲಸಿಕಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಜಿತೇಂದ್ರ ರಾಯ್ ಆರೋಗ್ಯ ಕಾರ್ಯಕರ್ತ ಇದಕ್ಕಾಗಿ ಶಾಲೆಗೆ ಬಂದಿದ್ದು, ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ ನಿಂದ ಲಸಿಕೆ ನೀಡಲು ಆರಂಭಿಸಿದ್ದಾನೆ. ಇದು ವಿದ್ಯಾರ್ಥಿಯೊಬ್ಬನ ಪೋಷಕರಾದ ದಿನೇಶ್ ಎಂಬವರ ಗಮನಕ್ಕೆ ಬಂದಿದೆ.
ಕೂಡಲೇ ಅವರು ಆರೋಗ್ಯ ಕಾರ್ಯಕರ್ತ ಜಿತೇಂದ್ರನನ್ನು ಪ್ರಶ್ನಿಸಿದ್ದು, ತಾನು ಈಗಾಗಲೇ 30ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಒಂದೇ ಸಿರಿಂಜ್ ನಿಂದ ಲಸಿಕೆ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತನಗೆ ಒಂದೇ ಸಿರಿಂಜ್ ನೀಡಿದ್ದು ಇದರಲ್ಲೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ತಿಳಿಸಲಾಗಿತ್ತು ಎಂದು ಆತ ಹೇಳಿದ್ದಾನೆ.
ಈ ಹಿಂದೆಯೇ ಸರ್ಕಾರ ‘ಒಂದು ನೀಡಲ್ – ಒಂದು ಸಿರಿಂಜ್ – ಒಮ್ಮೆ ಮಾತ್ರ ಬಳಕೆ’ ಎಂಬ ನಿಯಮವನ್ನು ಜಾರಿಗೆ ತಂದಿದ್ದು, ಇಲ್ಲಿ ಇದು ಸಂಪೂರ್ಣವಾಗಿ ಉಲ್ಲಂಘನೆಯಾಗಿದೆ. ಒಂದೇ ಸಿರಿಂಜ್ ನಿಂದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿರುವ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.