ನವದೆಹಲಿ: ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ಮೂರು ಚಾನೆಲ್ ಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿಷೇಧಿಸಿದೆ.
ಸುಮಾರು 33 ಲಕ್ಷ ಚಂದಾದಾರರನ್ನು ಹೊಂದಿದ್ದ ‘ನ್ಯೂಸ್ ಹೆಡ್ ಲೈನ್’, ‘ಸರ್ಕಾರಿ ಅಪ್ಡೇಟ್’ ಮತ್ತು ‘ಆಜ್ ತಕ್ ಲೈವ್’ ಹೆಸರಿನ ಯುಟ್ಯೂಬ್ ಚಾನೆಲ್ ಗಳಿಗೆ ನಿಷೇಧ ಹೇರಲಾಗಿದೆ. ಸುಪ್ರೀಂಕೋರ್ಟ್, ಪ್ರಧಾನಿ ಮೋದಿ, ಸಿಜೆಐ, ಚುನಾವಣಾ ಆಯೋಗ, ಸರ್ಕಾರಿ ಸಂಸ್ಥೆಗಳ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದ ಕಾರಣಕ್ಕೆ ಈ ವಾಹಿನಿಗಳ ವಿರುದ್ಧ ವಾರ್ತಾ ಹಾಗೂ ಪ್ರಸಾರ ಸಚಿವಾಲಯ ಕ್ರಮ ಕೈಗೊಂಡಿದೆ.
ವಾರ್ತಾ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ವಾಹಿನಿಗಳಲ್ಲಿ ನೂರಕ್ಕೂ ಹೆಚ್ಚು ಸುದ್ದಿಗಳು ಸುಳ್ಳಿನ ಕಂತೆ ಎಂಬುದು ಗೊತ್ತಾಗಿದೆ. ಸರ್ಕಾರಿ ಯೋಜನೆಗಳ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದ್ದು, ಮುಂದಿನ ಚುನಾವಣೆ ಮತಪತ್ರದಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆಧಾರ್ ಕಾರ್ಡ್ ಹೊಂದಿದ ಜನರ ಖಾತೆಗೆ ಸರ್ಕಾರ ಹಣ ಪಾವತಿಸಲಿದೆ ಎಂಬುದು ಸೇರಿದಂತೆ ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಆಕರ್ಷಕ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿವೆ.
ಅಲ್ಲದೇ, ಪ್ರಸಿದ್ಧ ಟಿವಿ ವಾಹಿನಿಗಳ ಲೋಗೋ ಮಾರ್ಪಡಿಸಿಕೊಂಡು ಬಳಕೆ ಮಾಡಿಕೊಂಡಿವೆ. ಈ ರೀತಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ‘ನ್ಯೂಸ್ ಹೆಡ್ ಲೈನ್’ ಗೆ10 ಲಕ್ಷ, ‘ಸರ್ಕಾರಿ ಅಪ್ಡೇಟ್’ಗೆ 22.6 ಲಕ್ಷ, ‘ಆಜ್ ತಕ್ ಲೈವ್’ಗೆ 65,000 ಚಂದಾದಾರರಿದ್ದಾರೆ. ಈ ರೀತಿ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ 100 ಚಾನೆಲ್ ಗಳನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಬ್ಯಾನ್ ಮಾಡಿದೆ.
. ಈ ಮೂರು ಚಾನೆಲ್‌ಗಳ ವಿರುದ್ಧದ ತನಿಖೆಯನ್ನು ಮಾಹಿತಿ ಪ್ರಸಾರ ಮಾಡುವ ಸರ್ಕಾರದ ನೋಡಲ್ ಏಜೆನ್ಸಿಯಾದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಸತ್ಯ-ಪರಿಶೀಲನಾ ಘಟಕವು ನಡೆಸಿದೆ. ಘಟಕವು 40 ಕ್ಕೂ ಹೆಚ್ಚು ಸತ್ಯ-ಪರೀಕ್ಷೆಗಳನ್ನು ನಡೆಸಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.