
ಮೂರು ವರ್ಷದ ಬಾಲಕಿಯನ್ನು ಲಾಕ್ ಮಾಡಿದ ಕಾರ್ ನಲ್ಲಿ ಪೋಷಕರು ಮರೆತು ಬಿಟ್ಟುಹೋದ ಪರಿಣಾಮ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಪೋಷಕರು ಮರೆತು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋದ ಕಾರಣ ಬೀಗ ಹಾಕಿದ್ದ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ರಾಜಸ್ಥಾನದ ಕೋಟಾದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಪೋಷಕರು ಅಜಾಗರೂಕತೆಯಿಂದ ಕಾರಿನೊಳಗೆ ಮಗುವನ್ನು ಗಂಟೆಗಟ್ಟಲೆ ಬಿಟ್ಟು ಹೋಗಿದ್ದರಿಂದ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ.
ಬುಧವಾರ ಸಂಜೆ ದಂಪತಿ, ಇಬ್ಬರು ಪುತ್ರಿಯರೊಂದಿಗೆ ವಿವಾಹ ಕಾರ್ಯಕ್ರಮಕ್ಕೆ ತೆರಳಿದ್ದರು. ವಿವಾಹದ ಸ್ಥಳ ತಲುಪಿದಾಗ ತಾಯಿ ತನ್ನ ಹಿರಿಯ ಮಗಳೊಂದಿಗೆ ಕಾರಿನಿಂದ ಹೊರಬಂದಳು. ಆದರೆ ಆಕೆ ತನ್ನ ಕಿರಿಯ ಮಗಳನ್ನು ಮರೆತು ಕಾರಿನಲ್ಲೇ ಬಿಟ್ಟಳು. ಆಕೆಯ ಪತಿ ವಾಹನವನ್ನು ಪಾರ್ಕ್ ಮಾಡಲು ಹೋಗಿದ್ದವರು ಕಾರ್ ಲಾಕ್ ಮಾಡಿಕೊಂಡು ಮದುವೆ ನಡೆಯುತ್ತಿದ್ದ ಜಾಗಕ್ಕೆ ಬಂದರು. ತನ್ನ ಇಬ್ಬರೂ ಹೆಣ್ಣುಮಕ್ಕಳು ಪತ್ನಿಯೊಂದಿಗೆ ಇದ್ದಾರೆ ಎಂದು ಭಾವಿಸಿದ್ದರು.
ಪತಿ, ಪತ್ನಿ ಪ್ರತ್ಯೇಕವಾಗಿ ಸುಮಾರು ಎರಡು ಗಂಟೆಗಳ ಕಾಲ ಮದುವೆ ಸಮಾರಂಭದಲ್ಲಿ ಹಲವರನ್ನು ಭೇಟಿಯಾಗಿದ್ದಾರೆ. ದಂಪತಿಗಳು ಅಂತಿಮವಾಗಿ ಪರಸ್ಪರ ಭೇಟಿಯಾದಾಗ, ತಮ್ಮ ಕಿರಿಯ ಮಗಳ ಬಗ್ಗೆ ಪರಸ್ಪರ ವಿಚಾರಿಸಿದ್ದಾರೆ. ತಮ್ಮ ಮಗಳು ತಮ್ಮೊಂದಿಗಿಲ್ಲ ಎಂದು ತಿಳಿದ ನಂತರ ಅವರು ಹುಡುಕಲು ಪ್ರಾರಂಭಿಸಿ ಕಾರ್ ನತ್ತ ದೌಡಾಯಿಸಿದರು.
ಕಾರಿನ ಹಿಂದಿನ ಸೀಟಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗು ಪತ್ತೆಯಾಯಿತು. ದಂಪತಿಗಳು ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಘೋಷಿಸಿದರು. ಮರಣೋತ್ತರ ಪರೀಕ್ಷೆ ನಡೆಸಲು ಪೋಷಕರು ನಿರಾಕರಿಸಿದ್ದು, ಪೊಲೀಸ್ ಕೇಸ್ ಕೂಡ ದಾಖಲಿಸದಿರಲು ನಿರ್ಧರಿಸಿದ್ದಾರೆ.