ತೀವ್ರ ಸೆಕೆಯಿಂದ ಅಪಾರ್ಟ್ಮೆಂಟ್ನ ನೆಲಮಾಳಿಗೆಯಲ್ಲಿ ಮಲಗಿದ್ದ 3 ವರ್ಷದ ಬಾಲಕಿ ಮೇಲೆ ಎಸ್ ಯು ವಿ ಹರಿದು ಬಾಲಕಿ ಸಾವನ್ನಪ್ಪಿರೋ ಹೃದಯವಿದ್ರಾವಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಘಟನೆಯ ದೃಶ್ಯ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಗುರುವಾರ ರಾತ್ರಿ 10 ಗಂಟೆಗೆ ಕರ್ನಾಟಕದ ಗುಲ್ಬರ್ಗ ಮೂಲದ 22 ವರ್ಷದ ಕವಿತಾ ಅವರಿಂದ ದೂರು ಸ್ವೀಕರಿಸಿದ್ದೇವೆ ಎಂದು ಹಯಾತ್ನಗರ ಪೊಲೀಸ್ ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
ಜೀವನೋಪಾಯಕ್ಕಾಗಿ ಮಕ್ಕಳೊಂದಿಗೆ ಹೈದರಾಬಾದ್ಗೆ ಬಂದಿದ್ದ ಕವಿತಾ ಘಟನೆಯಿಂದ ತನ್ನ ಮಗಳನ್ನು ಕಳೆದುಕೊಂಡಿದ್ದಾರೆ.
ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಹಯತ್ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೆಲಸ ಮಾಡಲು ಕವಿತಾ ಬಂದಿದ್ದರು. ಮಧ್ಯಾಹ್ನ 2:30 ರ ಸುಮಾರಿಗೆ ಅವರು ತಮ್ಮ ಮಕ್ಕಳಾದ 6 ವರ್ಷದ ಮಗ ಬಸವರಾಜು ಮತ್ತು 3 ವರ್ಷದ ಮಗಳು ಲಕ್ಷ್ಮಿಯೊಂದಿಗೆ ಊಟ ಮಾಡಿದ್ದರು. ಬಳಿಕ ಮಗಳು ಬಿಸಿಲು ತಾಳಲಾರದೇ ಹತ್ತಿರದ ಬಾಲಾಜಿ ಆರ್ಕೇಡ್ ಅಪಾರ್ಟ್ಮೆಂಟ್ನ ನೆಲಮಾಳಿಗೆಯಲ್ಲಿ ಮಲಗಿಕೊಳ್ಳಲು ಹೋಗಿದ್ದಳು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾರ್ಕಿಂಗ್ ಮಾಡುತ್ತಿದ್ದಾಗ ಮಗಳು ಲಕ್ಷ್ಮಿ ಮೇಲೆ ಎಸ್ಯುವಿ ಹರಿದಿದ್ದು, 3 ವರ್ಷದ ಬಾಲಕಿ ತಲೆಗೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಕವಿತಾ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.