ಡೆಹ್ರಾಡೂನ್: ವಂದೇ ಭಾರತ್ ರೈಲುಗಳ ಮೂರು ಆವೃತ್ತಿಗಳು – ವಂದೇ ಚೇರ್ ಕಾರ್, ವಂದೇ ಮೆಟ್ರೋ ಮತ್ತು ವಂದೇ ಸ್ಲೀಪರ್ಸ್ ಇವುಗಳನ್ನು ಮುಂದಿನ ವರ್ಷ ಫೆಬ್ರವರಿ-ಮಾರ್ಚ್ ಒಳಗೆ ಬಿಡಲಾಗುವುದು ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಸಚಿವರು, ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ವಂದೇ ಭಾರತ್ ರೈಲುಗಳ ಗರಿಷ್ಠ ವೇಗ 160 ಕಿಮೀ ವೇಗವನ್ನು ಬೆಂಬಲಿಸಲು ರೈಲ್ವೆ ಹಳಿಗಳನ್ನು ನವೀಕರಿಸಲಾಗುವುದು ಎಂದು ಹೇಳಿದರು.
ಅವರು ಉತ್ತರಾಖಂಡದ ಡೆಹ್ರಾಡೂನ್ನಿಂದ ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ ರೈಲು ನಿಲ್ದಾಣಕ್ಕೆ ವಂದೇ ಭಾರತ್ ರೈಲನ್ನು ಪ್ರಾರಂಭಿಸಿದ ನಂತರ ಮಾತನಾಡಿದರು.
“ವಂದೇ ಭಾರತ್ನ ಮೂರು ಸ್ವರೂಪಗಳಿವೆ. ವಂದೇ ಮೆಟ್ರೋ 100 ಕಿಲೋಮೀಟರ್ಗಿಂತ ಕಡಿಮೆ, ವಂದೇ ಚೇರ್ ಕಾರ್ 100-550 ಕಿಲೋಮೀಟರ್ ಮತ್ತು ವಂದೇ ಸ್ಲೀಪರ್ಸ್ 550 ಕಿಲೋಮೀಟರ್ಗಳಿಗೂ ಮೀರಿದ ಪ್ರಯಾಣಕ್ಕೆ. ಈ ಮೂರು ಸ್ವರೂಪಗಳು ಫೆಬ್ರವರಿ-ಮಾರ್ಚ್ (ಮುಂದಿನ ವರ್ಷ) ವೇಳೆಗೆ ಸಿದ್ಧವಾಗಲಿದೆ ಎಂದರು.
ಜೂನ್ ಮಧ್ಯದ ವೇಳೆಗೆ ಪ್ರತಿ ರಾಜ್ಯಕ್ಕೂ ವಂದೇ ಭಾರತ್ ರೈಲು ಸಿಗಲಿದೆ ಎಂದು ವೈಷ್ಣವ್ ಹೇಳಿದ್ದಾರೆ. ಈ ರೈಲುಗಳ ಉತ್ಪಾದನೆಯನ್ನು ತ್ವರಿತಗೊಳಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.