ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಿದ್ರಾದಲ್ಲಿ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ 3 ಭಯೋತ್ಪಾದಕರು ಹತರಾಗಿದ್ದಾರೆ.
ಸಿದ್ರಾದಲ್ಲಿ ಮೂವರು ಭಯೋತ್ಪಾದಕರು ಅಡಗಿಕೊಂಡಿದ್ದು, ಬುಧವಾರ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ಬಳಿಕ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ. ಮೂವರೂ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಎನ್‌ಕೌಂಟರ್ ಸ್ಥಳದಿಂದ ಒಬ್ಬ ಭಯೋತ್ಪಾದಕನ ಶವವನ್ನು ಹೊರತೆಗೆಯಲಾಗಿದೆ. ಗುಂಡಿನ ಚಕಮಕಿ ನಡೆದಾಗ ಟ್ರಕ್‌ನಲ್ಲಿ ಭಯೋತ್ಪಾದಕರು ಇದ್ದರು ಎಂದು ಜಮ್ಮು ಕಾಶ್ಮೀರ ಎಡಿಜಿಪಿ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯಲ್ಲಿ 15 ಕಿಲೋಗ್ರಾಂಗಳಷ್ಟು ಸುಧಾರಿತ ಸ್ಫೋಟಕ ಸಾಧನವನ್ನು(ಐಇಡಿ) ಪೊಲೀಸರು ನಿಷ್ಕ್ರಿಯಗೊಳಿಸಿದ ಕೇವಲ ಒಂದು ದಿನದ ನಂತರ ಪ್ರಮುಖ ಕಾರ್ಯಾಚರಣೆ ನಡೆಸಲಾಗಿದೆ.
ಬಸಂತ್‌ಗಢ ಪ್ರದೇಶದಲ್ಲಿ ಸಿಲಿಂಡರಾಕಾರದ ಐಇಡಿ, 300-400 ಗ್ರಾಂ ಆರ್‌ಡಿಎಕ್ಸ್, ಏಳು 7.62 ಎಂಎಂ ಕಾರ್ಟ್ರಿಡ್ಜ್ ಗಳು ಮತ್ತು ಐದು ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡು ದೊಡ್ಡ ಭಯೋತ್ಪಾದನಾ ಯೋಜನೆಯನ್ನು ತಪ್ಪಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.