ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರಾಕಾರ ಮಳೆಗೆ ಐಎಎಸ್ ಕೋಚಿಂಗ್ ಸೆಂಟರ್ ಗೆ ನೀರು ನುಗ್ಗಿದ ಪರಿಣಾಮ ಬೇಸ್ ಮೆಂಟ್ ನಲ್ಲಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ದೆಹಲಿಯ ಓಲ್ಡ್ ರಾಜಿಂದರ್ ನಗರ ಏರಿಯಾದಲ್ಲಿರುವ ಐಎಎಸ್ ತರಬೇತಿ ಕೇಂದ್ರಕ್ಕೆ ಏಕಾಏಕಿ ಪ್ರವಾಹದಂತೆ ನೀರು ನುಗ್ಗಲಾರಂಭಿಸಿದೆ. ತರಬೇತಿ ಕೇಂದ್ರ ನೆಲಮಾಳಿಗೆಯಲ್ಲಿತ್ತು ಎನ್ನಲಾಗಿದೆ. ನೆಲಮಾಳಿಗೆ ಕ್ಷಣಾರ್ಧದಲ್ಲಿ ಸಂಪೂರ್ಣ ಜಲಾವೃತಗೊಂಡಿದೆ. ನೆಲಮಾಳಿಗೆಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ನೀರು ತುಂಬಿಕೊಂಡಿದೆ ಎಂದು ನಮಗೆ ಕರೆ ಬಂದಿದೆ. ಕೆಲವರು ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದೇವೆ. ನೆಲಮಾಳಿಗೆ ವೇಗವಾಗಿ ನೀರಿನಿಂದ ತುಂಬಿಕೊಂಡಿದ್ದರಿಂದ ಮೂವರು ಸಾವನ್ನಪ್ಪಿದ್ದಾರೆ. ನೆಲಮಾಳಿಗೆಗೆ ನೀರು ಹೇಗೆ ತುಂಬಿದೆ ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಡಿಸಿಪಿ ಹರ್ಷವರ್ಧನ್ ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟವರನ್ನು 25 ವರ್ಷದ ತಾನ್ಯಾ ಸೋನಿ, ಉತ್ತರ ಪ್ರದೇಶ ಮೂಲದ ಶ್ರೇಯಾ ಯಾದವ್ ಹಾಗೂ 28 ವರ್ಷದ ನವೀನ್ ದಲ್ವಿನಿ ಎಂದು ಗುರುತಿಸಲಾಗಿದೆ.