ಬೆಂಗಳೂರು: ಮೂರು ಬೀದಿ ನಾಯಿಗಳು ನಾಪತ್ತೆಯಾಗಿವೆ ಎಂದು ವ್ಯಕ್ತಿಯೋರ್ವ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ವಿಚಿತ್ರ ಘಟನೆ ಬೆಂಗಲೂರಿನ ಶೇಷಾದ್ರಿಪುರಂ ವ್ಯಾಪ್ತಿಯಲ್ಲಿ ನಡೆದಿದೆ.
ಬೀದಿ ನಾಯಿಗಳಿಗೆ ಕಳೆದ ಹತ್ತು ವರ್ಷಗಳಿಂದ ಊಟ ಹಾಕುತ್ತಿದ್ದ ಪ್ರಕಾಶ್ ಎಂಬುವವರು ನಾಪತ್ತೆಯಾದ ನಾಯಿಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕಾಶ್ ಕುಮಾರಪಾರ್ಕ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಕಳೆದ ಹತ್ತು ವರ್ಷಗಳಿಂದ ನಾಯಿಗಳಿಗೆ ಊಟಹಾಕಿ ಸಲಹುತ್ತಿದ್ದರಂತೆ. ಆದರೆ ಅಕ್ಟೋಬರ್ 4ರ ಬಳಿಕ ಏಕಾಏಕಿ ಮೂರು ಬೀದಿ ನಾಯಿಗಳು ನಾಪತ್ತೆಯಾಗಿವೆ. ಕಣ್ಮರೆಯಾಗಿರುವ ನಾಯಿಗಳಿಗಾಗಿ ಪ್ರಕಾಶ್ ನಗರದೆಲ್ಲೆಡೆ ಹುಡುಕಿದ್ದಾರಂತೆ ಆದರೂ ನಾಯಿಗಳ ಸುಳಿವಿಲ್ಲ.
ನಾಯಿಗಳನ್ನು ಹಿಡಿದು ಯಾರೋ ಬೇರೆಡೆ ಬಿಟ್ಟಿರಬಹುದು. ಹುಡುಕಿಕೊಡಿ ಎಂದು ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ನಾಯಿಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ.