
ಈ ಪ್ರದೇಶದಲ್ಲಿ ಕೋಚಿಂಗ್ ಸೆಂಟರ್‌ಗಳ ಸಂಖ್ಯೆ ಹೆಚ್ಚಿರುವುದರಿಂದ ಮುಜಾಫರ್‌ನಗರದ ಗಾಂಧಿ ಕಾಲೋನಿ ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ. ಕಿರುಕುಳದಂತಹ ಘಟನೆಗಳನ್ನು ತಪ್ಪಿಸಲು ಪೊಲೀಸರು ಗಸ್ತು ತಿರುಗುತ್ತಾರೆ. ಕಳೆದ ಕೆಲ ದಿನಗಳಿಂದ ಕನ್ವರ್ ಯಾತ್ರೆಯಲ್ಲಿ ಪೊಲೀಸರು ನಿರತರಾಗಿದ್ದು, ಪರಿಸ್ಥಿತಿಯ ಲಾಭ ಪಡೆದ ದುಷ್ಕರ್ಮಿಗಳು ಕೋಚಿಂಗ್ ಸೆಂಟರ್ ಹೊರಗೆ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಇದರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಮೂರನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಗಾಂಧಿ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದ್ದು, ಮೂವರು ಮುಸುಕುಧಾರಿಗಳು ಬೈಕ್‌ನಲ್ಲಿ ಆಗಮಿಸಿ ಗಾಂಧಿ ಕಾಲೋನಿಯಲ್ಲಿರುವ ಮೋಹನ್ ಭಾಟಿಯಾ ಅವರ ಕೋಚಿಂಗ್ ಸೆಂಟರ್‌ನ ಹೊರಗೆ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ವಿದ್ಯಾರ್ಥಿನಿ ತಮ್ಮನ್ನು ಅವಮಾನಿಸಿದ್ದಾಳೆ ಎಂದು ಆರೋಪಿಸಿ ದುಷ್ಕರ್ಮಿಗಳು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತಾ ಅವರು ಕಿರುಕುಳ ನೀಡುತ್ತಲೇ ಇದ್ದರು. ಅವರನ್ನು ಅವಮಾನಿಸುವಂಥ ಯಾವುದೇ ಕೆಲಸ ಮಾಡಿಲ್ಲ ಎಂದು ವಿದ್ಯಾರ್ಥಿನಿ ಒತ್ತಿ ಹೇಳುತ್ತಿದ್ದರೂ ತಮ್ಮಲ್ಲಿ ಕ್ಷಮೆ ಯಾಚಿಸುವಂತೆ ದುಷ್ಕರ್ಮಿಗಳು ಒತ್ತಾಯಿಸುತ್ತಲೇ ಇದ್ದರು.
ಕ್ಷಮೆ ಕೇಳದಿದ್ದರೆ ಗುಂಡು ಹಾರಿಸುವುದಾಗಿಯೂ ಬೆದರಿಕೆ ಹಾಕಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಜನ ಮಧ್ಯ ಪ್ರವೇಶಿಸಿ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗಳನ್ನು ತಡೆಯಲಿಲ್ಲ. ಈ ವೇಳೆ ವಿದ್ಯಾರ್ಥಿನಿ ಕ್ಷಮೆ ಕೇಳಿದ್ದರಿಂದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಇಡೀ ಘಟನೆ ಕೋಚಿಂಗ್ ಸೆಂಟರ್‌ನ ಹೊರಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ವಿದ್ಯಾರ್ಥಿನಿ ತನ್ನ ತಂದೆ ಮತ್ತು ಸಹೋದರನಿಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಧಾವಿಸಿದರು. ಸಂಪೂರ್ಣ ಘಟನೆಯನ್ನು ವಿವರಿಸಿದ ಬಳಿಕ ಅವರು ದುಷ್ಕರ್ಮಿಗಳನ್ನು ಹುಡುಕಲು ಪ್ರಾರಂಭಿಸಿದರು.
ಗಾಂಧಿ ಕಾಲೋನಿಯಲ್ಲಿದ್ದ ಅವರನ್ನು ಹಿಡಿಯಲು ಯತ್ನಿಸಿದಾಗ ಅವರು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಬಾಲಕಿಯ ತಂದೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೈಕ್ ವಶಪಡಿಸಿಕೊಂಡು ಬೈಕ್ ನ ವಿವರ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮಾಲೀಕರಿಗಾಗಿ ಹುಡುಕಾಟ ನಡೆಸಿದರು.
ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಬಂಧಿಸಿದ ಬಳಿಕ ಆರೋಪಿಗಳು ಸರಿಯಾಗಿ ನಡೆದಾಡಲೂ ಸಾಧ್ಯವಾಗದ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆರೋಪಿಗಳನ್ನು ಶೋಭಿತ್ ಶರ್ಮಾ ಮತ್ತು ಉಜ್ವಲ್ ಕುಮಾರ್ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.