ಜೈಪುರ: ರಾಜಸ್ಥಾನದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೆಲಮಾಳಿಗೆಯಲ್ಲಿ ಮಣ್ಣು ಕುಸಿದು ಇಬ್ಬರು ಸಹೋದರರು ಸೇರಿದಂತೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಸೋಮವಾರ ಸಂಜೆ ಜಗತ್ಪುರದ ರಾಮನಗರಿಯ ಪ್ರದೇಶದ ಅಕ್ಷಯಪಾತ್ರ ಬಳಿ ನಿರ್ಮಾಣ ಹಂತದಲ್ಲಿರುವ ಮಾಲ್‌ನ ನೆಲಮಾಳಿಗೆಯಲ್ಲಿ ಪೈಲಿಂಗ್ ಮಾಡುವಾಗ ಮಣ್ಣು ಕುಸಿದು ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮತ್ತು ರಾಮನಗರಿಯ ಪೊಲೀಸ್ ಠಾಣೆ ಸಿಬ್ಬಂದಿ, ವಿಪತ್ತು ನಿರ್ವಹಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಸತತ ಕಾರ್ಯಾಚರಣೆ ನಂತರ ವಿಪತ್ತು ನಿರ್ವಹಣಾ ತಂಡ ಹಾಗೂ ಕಾರ್ಮಿಕರು ಸೇರಿ ಹೂತಿದ್ದ ಕಾರ್ಮಿಕರನ್ನು ಹೊರತೆಗೆದರು. ಈ ಪೈಕಿ ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಜೈಪುರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಾರ್ಮಿಕರನ್ನು ಜಾರ್ಖಂಡ್‌ನ ನಿವಾಸಿಗಳಾದ ರಾಮಜನ್ಮ್ ಸಿಂಗ್(35) ಮತ್ತು ಪ್ರೇಮ್ ಸಿಂಗ್(30) ಮತ್ತು ಬಿಹಾರದ ನಿವಾಸಿ ಇರ್ಷಾದ್ ಆಲಂ(23) ಎಂದು ಗುರುತಿಸಲಾಗಿದೆ.
ರಾಮ್ ನಗರಿಯ ಸ್ಟೇಷನ್ ಹೌಸ್ ಆಫೀಸರ್ ಅರುಣ್ ಕುಮಾರ್, ಜಗತ್‌ಪುರ ಪ್ರದೇಶದಲ್ಲಿ ನಿರ್ಮಾಣ ಸ್ಥಳದಲ್ಲಿ ಮರಳು ದಿಬ್ಬವೊಂದು ಬಿದ್ದಿದ್ದರಿಂದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಾಮಜನ್ಮ್ ಸಿಂಗ್ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಮತ್ತು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.