ನವದೆಹಲಿ : ಕೆಮ್ಮಿನ ಔಷಧಿ ಸೇವಿಸಿ ಮೂವರು ಮಕ್ಕಳು ಸಾವನ್ನಪ್ಪಿದ್ದು, 16 ಮಕ್ಕಳು ಅಸ್ವಸ್ಥರಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಚಿಕಿತ್ಸಾಲಯದಲ್ಲಿಯೇ ಈ ಘಟನೆ ನಡೆದಿದೆ. ಮಕ್ಕಳಿಗೆ ನೀಡಿದ್ದ ಔಷಧಿ ವಿಷಪೂರಿತವಾಗಿದ್ದರಿಂದಾಗಿ ಈ ಅವಘಡ ನಡೆದಿದ್ದು, ಘಟನೆಯ ನಂತರ ದೆಹಲಿ ಸರ್ಕಾರವು ಎಲ್ಲ ಮೊಹಲ್ಲಾ ಚಿಕಿತ್ಸಾಲಯಗಳಿಗೆ ಈ ಔಷಧವನ್ನು ನಾಲ್ಕು ವರ್ಷದ ಕೆಳಗಿನ ಮಕ್ಕಳಿಗೆ ನೀಡದಂತೆ ಆದೇಶ ಹೊರಡಿಸಿದೆ.
ಸದ್ಯ ಅಸ್ವಸ್ಥಗೊಂಡ ಮಕ್ಕಳನ್ನು ನಗರದಲ್ಲಿನ ಕಲಾವತಿ ಸರನ್ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಔಷಧ ಸೇವನೆಯಿಂದ ಅಡ್ಡ ಪರಿಣಾಮಗಳಿವೆ ಎನ್ನಲಾಗುತ್ತಿದೆ. ಈ ಔಷಧಿ ಸೇವನೆಯಿಂದ ಅರೆನಿದ್ರಾವಸ್ಥೆ, ಕಿರಿಕಿರಿ ಸೇರಿದಂತೆ ದೃಷ್ಟಿ ಮಂದಾಗುವ ಸಾಧ್ಯತೆ ಇರುತ್ತದೆ ಎಂದು ಪಾಟ್ನಾದ ಮಕ್ಕಳ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ. ಚಂದ್ರಮೋಹನ್ ಕುಮಾರ್ ಹೇಳಿದ್ದಾರೆ.
ಸಿಎಂ ಅರವಿಂದ್ ಕೇಜ್ರಿವಾಲ್ ಜನರಿಗೆ ಉಚಿತ ಸೇವೆ ನೀಡುವ ನಿಟ್ಟಿನಲ್ಲಿ ದೆಹಲಿಯಲ್ಲಿ 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್ ಗಳನ್ನು ತೆರೆದಿದ್ದಾರೆ.