3 ಇಡಿಯಟ್ಸ್ ಚಿತ್ರದ ನಂತರ ರಾಂಚೋ ಸ್ಕೂಲ್ ಎಂದೇ ಜನಪ್ರಿಯವಾಗಿರುವ ಡ್ರುಕ್ ಪದ್ಮಾ ಕಾರ್ಪೋ ಶಾಲೆಗೆ ಎರಡು ದಶಕಗಳ ದೀರ್ಘಕಾಲದ ಕಾಯುವಿಕೆ ನಂತರ ಸಿಬಿಎಸ್ಇ ಸ್ಥಾನಮಾನ ಅಥವಾ ಅಫಿಲಿಯೇಷನ್ ಸಿಗಬಹುದು ಎಂದು ಹೇಳಲಾಗ್ತಿದೆ. ಏಕೆಂದರೆ ಅಂತೂ ಇಂತೂ ಜಮ್ಮು ಮತ್ತು ಕಾಶ್ಮೀರ ಮಂಡಳಿ ಈ ಶಾಲೆಗೆ ನಿರಾಕ್ಷೇಪಣಾ ಪ್ರಮಾಣಪತ್ರ ದೊರೆತಿದೆ.
ಒಂದು ಶಾಲೆಗೆ ಸಿಬಿಎಸ್ಇ ಅಫಿಲಿಯೇಷನ್ ಸಿಗಬೇಕಾದರೆ ಹಲವು ಮಾನದಂಡಗಳಿರುತ್ತವೆ. ಅದರಲ್ಲಿ ಶಾಲೆಗಳು ಆಯಾ ರಾಜ್ಯದಿಂದ ನಿರಾಪೇಕ್ಷಣ ಪ್ರಮಾಣಪತ್ರ ಪಡೆಯುವ ಅಗತ್ಯವಿರುತ್ತದೆ. ವಿದೇಶಿ ಶಾಲೆಗಳಿಗು ಇದೇ ನಿಯಮ ಅನ್ವಯಿಸುತ್ತದೆ. ಅವರು ರಾಯಭಾರಿ ಕಛೇರಿಗಳಿಂದ ಪ್ರಮಾಣಪತ್ರ ಪಡೆಯಬೇಕು.
2009 ರಲ್ಲಿ ಅಮೀರ್ ಖಾನ್ ಅಭಿನಯದ ಚಲನಚಿತ್ರ “3 ಈಡಿಯಟ್ಸ್” ನಲ್ಲಿ ಕಾಣಿಸಿಕೊಂಡ ನಂತರ ಖ್ಯಾತಿ ಗಳಿಸಿದ ಶಾಲೆಯು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಲಾ ಶಿಕ್ಷಣ ಮಂಡಳಿಗೆ (JKBOSE) ಸಂಯೋಜಿತವಾಗಿದೆ. ನಾವು ಹಲವು ವರ್ಷಗಳಿಂದ ನಮ್ಮ ಶಾಲೆಯನ್ನು ಸಿಬಿಎಸ್‌ಇಗೆ ಸಂಯೋಜಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಶಾಲೆಯ ಪ್ರಾಂಶುಪಾಲೆ ಮಿಂಗೂರ್ ಅಗ್ಮೊ ಪಿಟಿಐಗೆ ತಿಳಿಸಿದ್ದಾರೆ.
ಶಾಲೆಯಲ್ಲಿ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳಿದ್ದರೂ, ಅತ್ಯುತ್ತಮ ಫಲಿತಾಂಶದ ದಾಖಲೆ ಇದ್ದರೂ, ಬೋಧನೆ ಮತ್ತು ಕಲಿಕೆಯ ನವೀನ ವಿಧಾನಗಳ ಮೇಲೆ ಕೇಂದ್ರೀಕರಿಸಿದ್ದರೂ, ನಮಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡುವುದು ವಿಳಂಬವಾಯ್ತು. ಈ ಇಪ್ಪತ್ತು ವರ್ಷಗಳಲ್ಲಿ ಹಲವಾರು ಪ್ರಯತ್ನಗಳನ್ನ ಮಾಡಿದ್ದೇವೆ.
ಅಂತಿಮವಾಗಿ ಈ ತಿಂಗಳು ನಮಗೆ NOC ಸಿಕ್ಕಿದೆ. ಈಗ ಸಿಬಿಎಸ್ಇ ಅಫಿಲಿಯೇಷನ್ ಪಡೆಯಲು ಎಲ್ಲಾ ಪ್ರಕ್ರಿಯೆಗಳನ್ನ ಶೀಘ್ರವೆ ಮುಗಿಸುತ್ತೇವೆ. ಇನ್ಮುಂದೆಯಾದರು ಯಾವುದೇ ಅಡೆತಡೆ ಇಲ್ಲದೇ ನಾವಂದುಕೊಂಡಂತೆ ಆಗುತ್ತದೆ ಎಂದು ಭಾವಿಸಿದ್ದೇನೆ ಎಂದು ಪ್ರಾಂಶುಪಾಲೆ ಮಿಂಗೂರ್ ತಿಳಿಸಿದ್ದಾರೆ.
ಲಡಾಖ್ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ಪಡೆದುಕೊಳ್ಳುವುದಕ್ಕು ಮೊದಲು ಈ ಶಾಲೆಯು ಕ್ಲಿಯರೆನ್ಸ್ ಪಡೆಯಲು ಪ್ರಯತ್ನಿಸುತ್ತಿದೆ. ವಿಭಜನೆಯ ನಂತರವೂ ಲಡಾಖ್‌ನ ಶಾಲೆಗಳು ಜಮ್ಮು ಮತ್ತು ಕಾಶ್ಮೀರ ಮಂಡಳಿಗೆ ಸಂಯೋಜಿತವಾಗಿವೆ. ಪ್ರದೇಶದ ನೈಸರ್ಗಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ವಾಸ್ತವಿಕ ಅಗತ್ಯಗಳನ್ನು ಪೂರೈಸುವುದಕ್ಕಾದರೂ ಲಡಾಖ್‌ನಲ್ಲಿ ಹೊಸ ಪ್ರಾದೇಶಿಕ ಮಂಡಳಿಯ ಸ್ಥಾಪನೆ ಮಾಡಿ ಎಂದು ಶೈಕ್ಷಣಿಕ ಸಮಿತಿ ಕಳೆದ ವರ್ಷ ಪ್ರಸ್ತಾಪಿಸಿದೆ.