ಅಕ್ರಮ ಬಂದೂಕು ಹೊಂದಿದ್ದ ಆರೋಪದ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿಯೊಬ್ಬರು ಸುದೀರ್ಘ 26 ವರ್ಷಗಳ ವಿಚಾರಣೆ ಬಳಿಕ ಕೊನೆಗೂ ಖುಲಾಸೆಯಾಗಿದ್ದಾರೆ. ಇಂತಹದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಘಟನೆಯ ವಿವರ: ಅಕ್ರಮ ನಾಡ ಬಂದೂಕು ಹೊಂದಿದ್ದಾರೆ ಎಂಬ ಕಾರಣಕ್ಕೆ ಮುಜಫರ್ ನಗರದ ರಾಮ್ ರತನ್ ವಿರುದ್ಧ 1996 ರಲ್ಲಿ ಪ್ರಕರಣ ದಾಖಲಾಗಿತ್ತು. ದಿನಗೂಲಿ ಮಾಡಿಕೊಂಡಿದ್ದ ರಾಮ್ ರತನ್ ತಾವು ಅಮಾಯಕ ಎಂದು ಎಷ್ಟೇ ಹೇಳಿದರೂ ಕೇಳದೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಈ ಸುದೀರ್ಘ 26 ವರ್ಷಗಳಲ್ಲಿ ನಾನೂರು ಬಾರಿ ಇದರ ವಿಚಾರಣೆ ನಡೆದಿದ್ದು, ದಿನಗೂಲಿ ಮಾಡುವ ರಾಮ್ ರತನ್ ತನ್ನ ಕೆಲಸ ಬಿಟ್ಟು ವಿಚಾರಣೆಗೆ ಹಾಜರಾಗಬೇಕಿತ್ತು. ಇದೀಗ ತನ್ನ ವಿರುದ್ಧದ ಕೇಸ್ ಖುಲಾಸೆಯಾದರೂ ಸಹ ತಾನು ಈವರೆಗೆ ಅನುಭವಿಸಿದ ಯಾತನೆಯನ್ನು ರಾಮ್ ರತನ್ ಹೇಳಿಕೊಂಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾದಾಗ ರಾಮ್ ರತನ್ ಗೆ 44 ವರ್ಷ. ಈಗ ಅವರ ವಯಸ್ಸು 70 ವರ್ಷ.