ಮೈಸೂರು: ರಾಜಕೀಯವಾಗಿ ಹಾಗೂ ಪಕ್ಷಕ್ಕೆ ಅನುಕೂಲವಾಗುವುದಾದರೆ ಹೈಕಮಾಂಡ್ ಮತ್ತೆ ಮೂರು ಡಿಸಿಎಂಗಳನ್ನು ನೇಮಕ ಮಾಡುತ್ತದೆ ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವೆಂಕಟೇಶ್, ಮತ್ತೆ ಮೂರು ಡಿಸಿಎಂ ನೇಮಕ ಮಾಡಬೇಕು ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ, ಅವರು ಯಾವ ದೃಷ್ಟಿಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದರು.
ಎಲ್ಲರಿಗೂ ಆಸೆ ಇರುತ್ತದೆ. ಹಾಗಾಗಿ ಕೇಳುವುದರಲ್ಲಿ ತಪ್ಪೇನು? ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.
ಕಾವೇರಿ ವಿಚಾರದಲ್ಲಿ ಸರ್ಕಾರ ಸಮರ್ಥವಾಗಿ ವಾದ ಮಂಡಿಸಿಲ್ಲ ಎಂಬ ವಿಪಕ್ಷಗಳ ಆರೋಪ ಒಪ್ಪಲ್ಲ. ಕಾವೇರಿ ನೀರು ನಿಯಂತ್ರಣ ಸಮಿತಿಯವರು ಕಾವೇರಿ ಕೊಳ್ಳಕ್ಕೆ ಭೇಟಿ ನೀಡಿ ವಾಸ್ತವಾಂಶವನ್ನು ಪರಿಶೀಲಿಸಬೇಕಿತ್ತು. ಅದನ್ನು ಆಧರಿಸಿ ಆದೇಶ ನೀಡಬೇಕಿತ್ತು. ಅದರ ಬದಲು ಅಲ್ಲೇ ಕುಳಿತು ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡುವುದು ಸರಿಯಲ್ಲ. ಸಂಕಷ್ಟ ಸೂತ್ರ ರಚಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಮಳೆ ಇಲ್ಲದಾಗ ಏನು ಮಾಡಬೇಕು ಎಂಬುದು ಎರಡೂ ರಾಜ್ಯಗಳಿಗೆ ಗೊತ್ತಿಲ್ಲ, ಸಂಕಷ್ಟ ಸೂತ್ರ ರಚಿಸಿದರೆ ಸಮಸ್ಯೆ ಪರಿಹಾರವಾಗುತ್ತೆ ಎಂದು ಹೇಳಿದರು.