
ಮಾರುಕಟ್ಟೆಗೆ ನಾನಾ ರೀತಿಯ ತಲೆ ದಿಂಬುಗಳು ಲಗ್ಗೆ ಇಟ್ಟಿವೆ. ಅನೇಕರಿಗೆ ತಲೆ ದಿಂಬು ಇಲ್ಲದೆ ನಿದ್ರೆ ಮಾಡಲು ಸಾಧ್ಯವೇ ಇಲ್ಲ. ಒಂದು ವೇಳೆ ಅವರಿಷ್ಟದ ತಲೆ ದಿಂಬು ಸಿಕ್ಕಿಲ್ಲವೆಂದ್ರೆ ನಿದ್ರೆ ಬಿಡಲು ಸಿದ್ಧವಿರುತ್ತಾರೆ. ಮತ್ತೆ ಕೆಲವರು ಬಟ್ಟೆಯನ್ನು ಸುತ್ತಿ, ತಲೆ ದಿಂಬು ಮಾಡಿ ಮಲಗ್ತಾರೆ.
ಆದ್ರೆ ಈ ತಲೆ ದಿಂಬು ಆರೋಗ್ಯಕ್ಕೆ ಒಳ್ಳೆಯದಲ್ಲ. ತಲೆ ದಿಂಬು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.
ಕುತ್ತಿಗೆ ನೋವು : ತಲೆ ದಿಂಬಿನ ಬಳಕೆಯಿಂದ ಕುತ್ತಿಗೆ ಮತ್ತು ತಲೆಗೆ ಸರಿಯಾದ ಬೆಂಬಲ ಸಿಗಬಹುದು. ಆದರೆ ತಪ್ಪು ಜಾಗದಲ್ಲಿ ಮತ್ತು ತಪ್ಪು ದಿಂಬಿನಿಂದಾಗಿ ಕುತ್ತಿಗೆಯ ಸ್ನಾಯುಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದು ಕುತ್ತಿಗೆ ನೋವಿಗೆ ಕಾರಣವಾಗಬಹುದು. ತಲೆದಿಂಬಿಲ್ಲದೆ ಮಲಗಿದರೆ, ಅದು ಕುತ್ತಿಗೆ ನೋವಿನಿಂದ ರಕ್ಷಿಸುವುದಲ್ಲದೆ, ಕುತ್ತಿಗೆ ಮತ್ತು ತಲೆಯ ರಕ್ತದ ಹರಿವನ್ನು ಸುಧಾರಿಸುತ್ತದೆ.
ದೇಹದ ಭಂಗಿ ಬದಲಾವಣೆ: ತಲೆದಿಂಬಿಲ್ಲದೆ ಮಲಗುವುದ್ರಿಂದ ಅನೇಕ ಪ್ರಯೋಜನವಿದೆ. ಬೆನ್ನುಮೂಳೆ ನೇರವಾಗಿರುತ್ತದೆ. ತಲೆದಿಂಬಿದ್ದರೆ ಬೆನ್ನು ಮೂಳೆ ನೇರವಾಗಿರಲು ಸಾಧ್ಯವಾಗುವುದಿಲ್ಲ. ಇದರಿಂದ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರ ಒತ್ತಡ ತಲೆಗೆ ಬೀಳುತ್ತದೆ.
ಮುಖದಲ್ಲಿ ಮೊಡವೆ : ಮೊಡವೆಗೆ, ಧೂಳು, ಕೊಳಕು, ಚರ್ಮದ ಮೇಲೆ ಎಣ್ಣೆ ಶೇಖರಣೆ ಸೇರಿ ಹಲವು ಕಾರಣಗಳಿವೆ. ಮೊಡವೆಗಳು ಉಂಟಾಗಲು ತಲೆ ದಿಂಬು ಕಾರಣವಾಗುತ್ತದೆ. ಕೊಳಕು ದಿಂಬಿನಿಂದಾಗಿ ಚರ್ಮದ ರಂಧ್ರಗಳು ಮುಚ್ಚಿ ಹೋಗುತ್ತವೆ. ಕೊಳಕು ಸಂಗ್ರಹವಾಗುತ್ತದೆ. ಅದರಿಂದಾಗಿ ಚರ್ಮವು ಮಂಕಾಗಿ ಮತ್ತು ನಿರುಪಯುಕ್ತವಾಗಿ ಕಾಣಲು ಆರಂಭಿಸುತ್ತದೆ. ತ್ವಚೆ ಕಾಪಾಡಬೇಕೆನ್ನುವವರು ತಲೆದಿಂಬು ಬಳಸಬೇಡಿ.