ಮೂರು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
27 ವರ್ಷದ ರಾಘವೇಂದ್ರ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, ಈತ ಭದ್ರಾವತಿಯ ಗ್ರಾಮವೊಂದರ ನಿವಾಸಿಯಾಗಿದ್ದಾನೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕುರಿತಂತೆ ನೊಂದ ಬಾಲಕಿಯ ತಾಯಿ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದರ ತನಿಖೆಯನ್ನು ನಡೆಸಿದ್ದ ಅಂದು ಭದ್ರಾವತಿ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ಇ.ಒ. ಮಂಜುನಾಥ್, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸೋಮವಾರದಂದು ನ್ಯಾಯಾಧೀಶರಾದ ಜೆ.ಎಸ್. ಮೋಹನ್ ತೀರ್ಪು ಪ್ರಕಟಿಸಿದ್ದು, ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ವಾದ ಮಂಡಿಸಿದ್ದರು.