ಪಾಪಿಗಳಿಂದಾನೇ ತುಂಬಿರೋ ಪಾಕಿಸ್ತಾನ್ನಲ್ಲಿ ಪ್ರಾಮಾಣಿಕರು ಇದ್ದಾರೆ ಅಂದ್ರೆ ನಂಬ್ತಿರಾ? ನಂಬೋದು ಕಷ್ಟವೇ ಆದರೆ ಇತ್ತಿಚೆಗೆ ಅಲ್ಲಿ ನಡೆದ ಒಂದು ಘಟನೆ ಎಂಥವರೂ ಕೂಡಾ ಅಚ್ಚರಿಪಡುವ ಹಾಗಿದೆ.
ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂದ್ರೆ, ಖದೀಜಾ ಅನ್ನುವವರು 3 ವರ್ಷಗಳ ಹಿಂದೆ ತಮ್ಮ ಬ್ಯಾಗ್ ನ್ನ ಕಳೆದುಕೊಂಡಿದ್ದಾರೆ. ಅದೇ ಬ್ಯಾಗ್ ಈಗ 3 ವರುಷದ ನಂತರ ಸಿಕ್ಕಿದೆ. ಬ್ಯಾಗ್ ಸಿಕ್ಕ ಖುಷಿಗೆ ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಅಸಲಿಗೆ ಆಕೆಯ ಬ್ಯಾಗ್ ಇಸ್ಲಾಮಾಬಾದ್‌ನ ಏರ್ಪೋಟ್‌ನಲ್ಲಿ 2018ರಲ್ಲಿ ಕಾಣೆಯಾಗಿತ್ತು. ಅದರಲ್ಲಿ ಲ್ಯಾಬ್‌ಟಾಪ್ ಹಾಗೂ ಕೆಲವು ಮುಖ್ಯವಾದ ವಸ್ತುಗಳಿದ್ದವು. ಕಳ್ಳರು ಕದ್ದೊಯ್ದಿದ್ದಾರೆ ಅಂತ ಆಕೆ ಆ ಬ್ಯಾಗ್‌ನ್ನ ಆಸೆಯನ್ನೇ ಬಿಟ್ಟಿದ್ದಳು. ಆದರೆ ಈಗ 3 ವರ್ಷಗಳ ನಂತರ ಓರ್ವ ಅಂಗಡಿ ಮಾಲೀಕ ಆಕೆಗೆ ಫೋನ್ ಮಾಡಿ ಬ್ಯಾಗ್‌ನ ಸುರಕ್ಷಿತವಾಗಿ ಆಕೆಯ ಕೈಗೆ ಹಿಂದಿರುಗಿಸಿದ್ದಾರೆ. ಆಕೆಗೆ ಆದ ಅನುಭವವನ್ನ ತಮ್ಮ ಟ್ವಿಟರ್ ಅಕೌಂಟ್ @5odayja ನಲ್ಲಿ ಹಂಚಿಕೊಂಡಿದ್ದಾರೆ.
“ಇಸ್ಲಾಮಾಬಾದ್‌ನ ಏರ್‌ಪೋರ್ಟ್‌ನಲ್ಲಿ ನನ್ನ ಬ್ಯಾಗ್ ಕಾಣೆಯಾಗಿತ್ತು. ಈ ಬ್ಯಾಗ್ ಕಳೆದು ಹೋಗಿದ್ದಕ್ಕೆ ನನಗೆ ನೋವಾಗಿತ್ತು. ನಾನು ಆ ಬ್ಯಾಗ್‌ನ್ನ ಏನಿಲ್ಲ ಅಂದರೂ 1-2 ವರ್ಷ ಹುಡುಕಾಡಿದೆ. ಆದರೂ ಆ ಬ್ಯಾಗ್ ಸಿಕ್ಕಿರಲಿಲ್ಲ. ಕೊನೆಗೆ ನಿರಾಶೆಯಿಂದ ಆ ಬ್ಯಾಗ್ ಆಸೆಯನ್ನೇ ಬಿಟ್ಟೆ. 2021 ನಾನು ಬೇರೆ ಮಾರ್ಗವಿಲ್ಲದೇ ಹೊಸ ಸಿಸ್ಟಮ್ಸ್ ಖರೀದಿಸಿದೆ. ಇದರ ನಡುವೆ ನನಗೆ ಕರೆ ಬಂದಿದೆ. ಕರೆ ಮಾಡಿದವರ ಬಳಿ ನನ್ನ ಕಳೆದು ಹೋದ ಬ್ಯಾಗ್ ಇತ್ತು. ಅವರು ಆ ಸುದ್ದಿಯನ್ನ ನನಗೆ ಹೇಳಿದಾಗ ನನಗೆ ನಂಬುವುದು ಅಸಾಧ್ಯವಾಗಿತ್ತು. ಕೊನೆಗೆ ಆ ಬ್ಯಾಗ್‌ನ ಫೋಟೋಗಳನ್ನ ಕಳುಹಿಸೋದಕ್ಕೆ ಹೇಳಿದೆ. ಅವರು ಕಳುಹಿಸಿದ ಫೋಟೋಗಳನ್ನ ನೋಡಿದಾಗ ನಾನು ಶಾಕ್ ಆಗಿದ್ದೆ, ಯಾಕಂದ್ರೆ ಅದು ನನ್ನ ಕಳೆದು ಹೋದ ಬ್ಯಾಗ್ ಆಗಿತ್ತು. 3 ವರ್ಷದ ಹಿಂದೆ ಆ ಬ್ಯಾಗ್‌ಲ್ಲಿ ಯಾವೆಲ್ಲ ವಸ್ತುಗಳಿದ್ದವೋ ಆ ಎಲ್ಲ ವಸ್ತುಗಳು ಸುರಕ್ಷಿತವಾಗಿದ್ದವು ಎಂದು ಖದೀಜಾ ಅವರು ಹೇಳಿಕೊಂಡಿದ್ದಾರೆ.
ಖದೀಜಾ ಅವರಿಗೆ ಫೋನ್ ಮಾಡಿದ ವ್ಯಕ್ತಿ ಪುಟ್ಟ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದಾರೆ. ಅವರ ಅಂಗಡಿಗೆ 3 ವರ್ಷದ ಹಿಂದೆ ಬಂದ ವ್ಯಕ್ತಿಯೊಬ್ಬ ಈ ಬ್ಯಾಗ್‌ನ್ನ ಮಾರಾಟ ಮಾಡುವುದಕ್ಕೆ ಬಂದಿದ್ದಾನೆ. ಆತನ ಮೇಲೆ ಅನುಮಾನ ಬಂದಿದೆ. ವಿಚಾರಿಸಿದಾಗ ಆತ ಕಳ್ಳನೆಂಬುವುದು ಗೊತ್ತಾಗಿದೆ. ತಕ್ಷಣವೇ ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೊನೆಗೆ ಮಾಲೀಕರೇ ಆ ಬ್ಯಾಗ್‌ನ್ನ ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಂಡಿದ್ಧಾರೆ. ಬ್ಯಾಗ್‌ನ ಮಾಲೀಕರನ್ನ ಹುಡುಕಿ ಆ ಬ್ಯಾಗ್ ಹಿಂದಿರುಗಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಕೊನೆಗೆ ಬ್ಯಾಗ್‌ನಲ್ಲಿದ್ದ ಹಾರ್ಡ್‌ಡಿಸ್ಕ್ ಒಳಗೆ ಕೆಲ ಮಾಹಿತಿಗಳು ಸಿಕ್ಕಿವೆ. ಅದನ್ನೇ ಇಟ್ಟುಕೊಂಡು ಹುಡುಕಿದಾಗ ಈ ಬ್ಯಾಗ್ ಮಾಲೀಕರು ಸಿಕ್ಕಿದ್ದಾರೆ. ಕೊನೆಗೆ ಅವರನ್ನ ಸಂಪರ್ಕಿಸಿ ಈ ಬ್ಯಾಗ್‌ನ್ನ ಅವರ ಕೈಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.
ಖದೀಜಾ ಅವರು ತಮಗಾದ ಅನುಭವವನ್ನ ಟ್ವೀಟರ್‌ನಲ್ಲಿ ಎಳೆ ಎಳೆಯಾಗಿ ಹೇಳಿಕೊಂಡಿದ್ದಾರೆ. ಇಂತಹ ಕಾಲದಲ್ಲಿ ಇಂಥ ಪ್ರಾಮಾಣಿಕರು ಇದ್ದಾರೆ ಅಂತ ಬರೆದುಕೊಂಡಿದ್ದಾರೆ. ಇದನ್ನ ಓದಿದ ನೆಟ್ಟಿಗರು ಇದೊಂದು ನಂಬಲು ಸಾಧ್ಯವಾಗದ ಘಟನೆ, ಅಂಗಡಿ ಮಾಲೀಕನ ಪ್ರಾಮಾಣಿಕತನ ಮೆಚ್ಚಲೇಬೇಕಾದಂಥಹದ್ದು ಅಂತ ಹೇಳಿದ್ದಾರೆ.