ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ತಮ್ಮ ಪುತ್ರನ ಕಚೇರಿ ಹಾಗೂ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಕೋಟ್ಯಾಂತರ ರೂಪಾಯಿ ಪತ್ತೆಯಾದ ಹಿನ್ನೆಲೆಯಲ್ಲಿ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ಅವರು ಬಂಧನ ಭೀತಿಯನ್ನೂ ಎದುರಿಸುತ್ತಿದ್ದಾರೆ.
ಹೀಗಾಗಿ ಅಜ್ಞಾತ ಸ್ಥಳದಲ್ಲಿ ಮಾಡಾಳು ವಿರೂಪಾಕ್ಷಪ್ಪನವರಿದ್ದು, ಆದರೆ ಲೋಕಾಯುಕ್ತರ ದಾಳಿ ವೇಳೆ ಹಲವು ಮಹತ್ವದ ದಾಖಲೆ ಪತ್ರಗಳು ಪತ್ತೆಯಾಗಿವೆ ಎನ್ನಲಾಗಿದೆ. ಚನ್ನಗಿರಿ ಸಮೀಪದ ಚನ್ನೇಶಪುರದಲ್ಲಿರುವ ಶಾಸಕರ ಮನೆ ಮೇಲೆ ದಾಳಿ ನಡೆಸಿದಾಗಲು ದೊಡ್ಡ ಪ್ರಮಾಣದಲ್ಲಿ ಆಸ್ತಿ ಪತ್ರಗಳು ಹಾಗೂ ಚಿನ್ನಾಭರಣ ಪತ್ತೆಯಾಗಿದೆ.
ಇದರ ಮಧ್ಯೆ ಮಾಡಾಳು ವಿರೂಪಾಕ್ಷಪ್ಪ ತಮ್ಮ ಮೂವರು ಪುತ್ರರ ಹೆಸರಿನಲ್ಲಿ ಗುಟ್ಕಾ ಕಂಪನಿಯನ್ನು ಆರಂಭಿಸಿರುವುದು ಬೆಳಕಿಗೆ ಬಂದಿದ್ದು, ಎಂ ಆರ್ ಪಿ ಪಾನ್ ಮಸಾಲ ಹೆಸರಿನ ಇದರಲ್ಲಿ ಅವರ ಮೂವರ ಪುತ್ರರ ಹೆಸರಿನ ಆರಂಭದ ಅಕ್ಷರಗಳಿವೆ ಎನ್ನಲಾಗಿದೆ.
ವಿರೂಪಾಕ್ಷಪ್ಪನವರ ಪುತ್ರ ಮಾಡಾಳು ಮಲ್ಲಿಕಾರ್ಜುನ, ರಾಜಣ್ಣ ಅಲಿಯಾಸ್ ಪ್ರವೀಣ ಹಾಗೂ ಪ್ರಶಾಂತ್ ಹೆಸರಿನಲ್ಲಿ ಎಂ ಆರ್ ಪಿ ಪಾನ್ ಮಸಾಲ ಘಟಕವನ್ನು ಸ್ವಗ್ರಾಮ ಚನ್ನೇಶಪುರದಲ್ಲಿ ಎರಡು ತಿಂಗಳ ಹಿಂದಷ್ಟೇ ಆರಂಭಿಸಿದ್ದು, ಚನ್ನಗಿರಿ ಸುತ್ತಮುತ್ತಲಿನ ಭಾಗದಲ್ಲಿ ಪ್ರತಿಯೊಂದು ಬೀಡಾ, ಗೂಡಂಗಡಿಗಳಲ್ಲಿ ಇದನ್ನೇ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.