ಬೆಂಗಳೂರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರ ಎರಡು ಪೂರಕ ಪರೀಕ್ಷೆಗಳನ್ನು ನಡೆಸುತ್ತಿರುವುದು ಅವೈಜ್ಞಾನಿಕವಾಗಿದೆ ಮತ್ತು ಅಪ್ರಯೋಜಕವಾಗಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಮರು ಪರಿಶೀಲನೆ ನಡೆಸಬೇಕೆಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಈ ಕುರಿತಾಗಿ ರಾಜ್ಯ ಪದವಿ ಪೂರ್ವ ಕಾಲೇಜುಗಳು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಸ್. ನಿಂಗೇಗೌಡ ಪತ್ರ ಬರೆದಿದ್ದಾರೆ.
ಈಗಾಗಲೇ ಪ್ರಥಮ, ದ್ವಿತೀಯ ಕಿರುಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ, ವಾರ್ಷಿಕ ಪರೀಕ್ಷೆ ಮತ್ತು ಪೂರಕ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸುವ ಒತ್ತಡ ಉಪನ್ಯಾಸಕರ ಮೇಲಿದ್ದು, ಇನ್ನೊಂದು ಪೂರಕ ಪರೀಕ್ಷೆ ನಡೆಸುವ ಮೂಲಕ ವರ್ಷ ಪೂರ್ತಿ ಪರೀಕ್ಷೆ ಮೌಲ್ಯಮಾಪನ ನಡೆಸುತ್ತಾ ಹೋದರೆ ವಿದ್ಯಾರ್ಥಿಗಳಿಗೆ ಪಠ್ಯಬೋಧನೆ ಮಾಡುವುದು ಪ್ರಾಯೋಗಿಕವಾಗಿ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಪದವಿ ಪೂರ್ವ ಕಾಲೇಜುಗಳಲ್ಲಿ 4,073 ಉಪನ್ಯಾಸಕರು, ಅನುದಾನಿತ ಪಿಯು ಕಾಲೇಜುಗಳಲ್ಲಿ 2500 ಉಪನ್ಯಾಸಕರ ಕೊರತೆ ಇದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ಪೂರಕ ಪರೀಕ್ಷೆ ನಡೆಸುತ್ತಿರುವುದು ಚಿಂತನೆ ಮರುಪರಿಶೀಲಿಸಬೇಕೆಂದು ಹೇಳಲಾಗಿದೆ.