ಮೊರಾಕೋದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿನ ಸಂಖ್ಯೆ 296 ಕ್ಕೆ ಏರಿಕೆಯಾಗಿದ್ದು, ಮೃತರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ ‘ಮೊರಾಕೊದಲ್ಲಿ ಸಂಭವಿಸಿದ ಭೂಕಂಪದಿಂದ ಹಲವರು ಪ್ರಾಣ ಕಳೆದಿದ್ದು, ತೀವ್ರ ನೋವಾಗಿದೆ. ಈ ದುರಂತದ ಸಮಯದಲ್ಲಿ, ನನ್ನ ಆಲೋಚನೆಗಳು ಮೊರೊಕ್ಕೊ ಜನರೊಂದಿಗೆ ಇವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಈ ಸಮಯದಲ್ಲಿ ಮೊರಾಕೊಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಮೊರಾಕೊದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 296 ಜನ ಸಾವನ್ನಪ್ಪಿದ್ದಾರೆ. ರಾತ್ರಿ 11 ಗಂಟೆಯ ನಂತರ ಮರಕೇಶ್ನ ನೈಋತ್ಯಕ್ಕೆ 72 ಕಿಮೀ ಮತ್ತು ಅಟ್ಲಾಸ್ ಪರ್ವತ ಪಟ್ಟಣವಾದ ಒಕೈಮೆಡೆನ್ನಿಂದ 56 ಕಿಮೀ ಪಶ್ಚಿಮಕ್ಕೆ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ತುಲನಾತ್ಮಕವಾಗಿ 18.5 ಕಿಮೀ ಆಳದಲ್ಲಿದೆ. ಭೂಕಂಪವು ಪ್ರಮುಖ ನಗರಗಳಲ್ಲಿನ ಕಟ್ಟಡಗಳಿಗೆ ಭಾರಿ ಹಾನಿಯನ್ನುಂಟು ಮಾಡಿತು ಮತ್ತು ನಿವಾಸಿಗಳಲ್ಲಿ ಭೀತಿಯನ್ನುಂಟು ಮಾಡಿದೆ.