ಜಗತ್ತಿನ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಟೆಸ್ಲಾ ವಿಶೇಷವಾದ ಆಫರ್ ಒಂದನ್ನು ಪ್ರಕಟಿಸಿದೆ. ದಿನಕ್ಕೆ ಏಳು ಗಂಟೆಗಳ ಕಾಲ ನಡೆಯಲು ಸಿದ್ಧರಿರುವ ವ್ಯಕ್ತಿಗಳಿಗೆ ಗಂಟೆಗೆ ಸುಮಾರು 4,000 ರೂಪಾಯಿ ನೀಡುವುದಾಗಿ ಹೇಳಿದೆ.
ಟೆಸ್ಲಾ ತನ್ನ ಹ್ಯೂಮನಾಯ್ಡ್ ರೋಬೋಟ್ ಆಪ್ಟಿಮಸ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಭಾಗವಾಗಿ ಈ ಕೊಡುಗೆಯನ್ನು ಪ್ರಕಟಿಸಲಾಗಿದೆ. ಮೋಷನ್-ಕ್ಯಾಪ್ಚರ್ ತಂತ್ರಜ್ಞಾನವನ್ನು ಬಳಸಿಕೊಂಡು ರೋಬೋಟ್‌ಗೆ ತರಬೇತಿ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಈ ಅವಕಾಶದ ಮೂಲಕ ದಿನಕ್ಕೆ 28,000 ರೂಪಾಯಿ ಗಳಿಸಬಹುದು.
ಟೆಸ್ಲಾದ ಸಿಇಒ ಎಲೋನ್ ಮಸ್ಕ್ ಅವರು 2021 ರಲ್ಲಿ ಆಪ್ಟಿಮಸ್ ಪರಿಕಲ್ಪನೆಯನ್ನು ಮೊದಲು ಪರಿಚಯಿಸಿದರು. ಇದು ಕಾರ್ಖಾನೆಯ ಕೆಲಸದಿಂದ ಹಿಡಿದು ಆರೈಕೆಯವರೆಗೆ ಎಲ್ಲವನ್ನೂ ನಿರ್ವಹಿಸುವ ಸಾಮರ್ಥ್ಯವಿರುವ ಬಹು-ಕ್ರಿಯಾತ್ಮಕ ರೋಬೋಟ್. ಕಳೆದ ವರ್ಷದಲ್ಲಿ ಟೆಸ್ಲಾ ಇದನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನಹರಿಸಿದೆ. ಮೋಷನ್-ಕ್ಯಾಪ್ಚರ್ ಸೂಟ್‌ಗಳ ಮೂಲಕ ಆಪ್ಟಿಮಸ್‌ನ ತರಬೇತಿಯಲ್ಲಿ ಸಹಾಯ ಮಾಡಲು ಹಲವಾರು ಕೆಲಸಗಾರರನ್ನು ನೇಮಿಸಿಕೊಂಡಿದೆ.
“ಡೇಟಾ ಕಲೆಕ್ಷನ್ ಆಪರೇಟರ್”ಎಂಬ ಹುದ್ದೆ ಇದಾಗಿದ್ದು, ಮೋಷನ್-ಕ್ಯಾಪ್ಚರ್ ಸೂಟ್ ಮತ್ತು ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್ ಅನ್ನು ಪ್ರತಿದಿನ ಏಳು ಗಂಟೆಗಳಿಗೂ ಹೆಚ್ಚು ಕಾಲ ಧರಿಸಿ ಪರೀಕ್ಷಾ ಮಾರ್ಗಗಳಲ್ಲಿ ನಡೆಯಬೇಕು. ಇದರ ಜೊತೆಗೆ ಡೇಟಾ ಸಂಗ್ರಹಣೆ ಮತ್ತು ವಿಶ್ಲೇಷಣೆ, ವರದಿ ಬರವಣಿಗೆ ಮತ್ತು ಸಣ್ಣ ಸಲಕರಣೆ-ಸಂಬಂಧಿತ ಕಾರ್ಯಗಳನ್ನೂ ಮಾಡಬೇಕು.
ಈ ಕೆಲಸವು 5’7″ ಮತ್ತು 5’11” ನಡುವಿನ ಎತ್ತರ, 30 ಪೌಂಡುಗಳವರೆಗೆ ತೂಕ ಸಾಗಿಸುವ ಸಾಮರ್ಥ್ಯ ಮತ್ತು ವಿಸ್ತೃತ ಅವಧಿಯವರೆಗೆ VR ಉಪಕರಣಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವವರಿಗೆ ಮೀಸಲಾಗಿದೆ.
ಸ್ಪರ್ಧಾತ್ಮಕ ವೇತನದ ಹೊರತಾಗಿ ಟೆಸ್ಲಾ ಉದ್ಯೋಗಿಗಳಿಗೆ ಇನ್ನೂ ಹಲವು ಸೌಲಭ್ಯ ಒದಗಿಸಲಿದೆ. ಸಮಗ್ರ ವೈದ್ಯಕೀಯ ನೆರವು, ದಂತ ಮತ್ತು ದೃಷ್ಟಿಗೆ ಸಂಬಂಧಿಸಿದ ಸಹಕಾರ, ಕುಟುಂಬ-ನಿರ್ಮಾಣ ಬೆಂಬಲ ಮತ್ತು ನಿವೃತ್ತಿ ಪ್ರಯೋಜನಗಳನ್ನು ಒಳಗೊಂಡಂತೆ ಹಲವಾರು ಸೌಲಭ್ಯಗಳನ್ನು ನೀಡಲಿದೆ.
ಈ ಹುದ್ದೆಯ ವೇತನ ಶ್ರೇಣಿಯು ಪ್ರತಿ ಗಂಟೆಗೆ 25.25 ಡಾಲರ್‌ನಿಂದ 48 ಡಾಲರ್‌ವರೆಗೆ ಇರಲಿದೆ. ಅಭ್ಯರ್ಥಿಯ ಅನುಭವ, ಕೌಶಲ್ಯ ಮತ್ತು ಸ್ಥಳವನ್ನು ಅವಲಂಬಿಸಿ ಗಂಟೆಗೆ ಸರಿಸುಮಾರು 2,120 ರಿಂದ 4,000 ರೂಪಾಯಿ ವೇತನ ನೀಡಲಾಗುತ್ತದೆ. ಸಂಭಾವ್ಯ ನಗದು ಮತ್ತು ಸ್ಟಾಕ್ ಪ್ರಶಸ್ತಿಗಳನ್ನು ಸಹ ಇದು ಒಳಗೊಂಡಿದೆ. ರೊಬೊಟಿಕ್ಸ್ ಮತ್ತು AI ಅಭಿವೃದ್ಧಿಗೆ ಸಂಬಂಧಿಸಿದ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಇದು ಲಾಭದಾಯಕ ಅವಕಾಶವಾಗಿದೆ.
ಉದ್ಯೋಗಿಗಳ ಪಾಳಿಗಳ ಆಧಾರದ ಮೇಲೆ ಕೆಲಸ ಮಾಡಬೇಕು. ಬೆಳಗ್ಗೆ 8 ರಿಂದ 4:30 ಅಥವಾ ಮಧ್ಯಾಹ್ನ 4 ರಿಂದ 12:30, ಅಥವಾ ರಾತ್ರಿ 12 ರಿಂದ 8:30ರವರೆಗಿನ ಪಾಳಿಯಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. ಈ ಎಲ್ಲಾ ವಿವರಗಳು ಟೆಸ್ಲಾ ಪೇಜ್‌ನಲ್ಲಿ ಲಭ್ಯವಿವೆ. ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊನಲ್ಲಿ ಈ ಉದ್ಯೋಗಾವಕಾಶವಿದೆ.