ಸರ್ಕಾರಿ ವಸತಿ ಶಾಲೆಯಲ್ಲಿದ್ದ 28 ವಿದ್ಯಾರ್ಥಿನಿಯರು ಕೋವಿಡ್ ಸೋಂಕಿಗೆ ತುತ್ತಾದ ಘಟನೆಯು ತೆಲಂಗಾಣದ ಖಮ್ಮಂ ಜಿಲ್ಲೆಯ ವೈರಾ ಎಂಬಲ್ಲಿ ನಡೆದಿದೆ. ಮಕ್ಕಳು ಸೋಂಕಿಗೆ ತುತ್ತಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಗೆ ಧಾವಿಸಿದ ಪೋಷಕರು ಮಕ್ಕಳನ್ನು ತಮ್ಮೊಡನೆ ಮನೆಗೆ ಕಳುಹಿಸಿಕೊಡುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಆರೋಗ್ಯ ಇಲಾಖೆಯು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೊರೊನಾ ಪರೀಕ್ಷೆಯನ್ನು ನಡೆಸಿದೆ. ಈ ವಸತಿ ಶಾಲೆಯಲ್ಲಿ ಒಟ್ಟು 575 ಮಂದಿ ವ್ಯಾಸಂಗ ಮಾಡುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಆರೋಗ್ಯ ಇಲಾಖೆಗೆ ಕರೆ ಮಾಡಿದ ತೆಲಂಗಾಣ ಆರೋಗ್ಯ ಸಚಿವ, ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದ್ದಾರೆ. ಅಲ್ಲದೇ ಶಾಲೆಯ ಸುತ್ತಮುತ್ತಲಿನ ವಾತಾವರಣದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.