ಉತ್ತರಾಖಂಡ್ ನ ಘರ್ವಾಲಿಯಲ್ಲಿ 28 ಪರ್ವತಾರೋಹಿಗಳು ಹಿಮಪಾತದಲ್ಲಿ ಸಿಲುಕಿದ್ದಾರೆ. ಅವರಲ್ಲಿ ಅನೇಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಘಟನೆ ನಡೆದ ಉತ್ತರಾಖಂಡದ ದ್ರೌಪದಿ ದಂಡ-2 ಶಿಖರಕ್ಕೆ ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ಸಿಬ್ಬಂದಿ ದೌಡಾಯಿಸಿದ್ದಾರೆ. ದ್ರೌಪದಿಯ ದಂಡ-2 ಪರ್ವತ ಶಿಖರದಲ್ಲಿ ಹಿಮಕುಸಿತದಲ್ಲಿ ಸಿಲುಕಿರುವ ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಲು DRF ತಂಡಗಳು ಡೆಹ್ರಾಡೂನ್‌ನ ಸಹಸ್ತ್ರಧಾರಾ ಹೆಲಿಪ್ಯಾಡ್‌ನಿಂದ ಹೊರಟಿವೆ.
ದ್ರೌಪದಿಯ ದಂಡ-2 ಪರ್ವತ ಶಿಖರದಲ್ಲಿ ಸಂಭವಿಸಿದ ಹಿಮಕುಸಿತದ ನಂತರ ನೆಹರು ಪರ್ವತಾರೋಹಣ ಸಂಸ್ಥೆಯ 28 ಪ್ರಶಿಕ್ಷಣಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಜಿಲ್ಲಾಡಳಿತದಿಂದ ತ್ವರಿತ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪಿ.ಎಸ್. ಧಾಮಿ ತಿಳಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಸೇನೆಯ ಸಹಾಯ ಒದಗಿಸಲು ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಇದಕ್ಕಾಗಿ ಅವರು ನಮಗೆ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಎಲ್ಲರನ್ನೂ ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಧಾಮಿ ತಿಳಿಸಿದ್ದಾರೆ.
ರಾಜನಾಥ್ ಸಿಂಗ್ ಸಂತಾಪ
ಅವಘಡದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ರಾಜನಾಥ್ ಸಿಂಗ್ ಸಾಂತ್ವನ ಹೇಳಿದ್ದಾರೆ. “ಉತ್ತರಕಾಶಿಯ ನೆಹರು ಪರ್ವತಾರೋಹಣ ಸಂಸ್ಥೆಯು ನಡೆಸಿದ ಪರ್ವತಾರೋಹಣ ಯಾತ್ರೆಗೆ ಅಪ್ಪಳಿಸಿದ ಭೂಕುಸಿತದಿಂದ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನನ್ನ ಸಂತಾಪ ಎಂದು ಅವರು ಟ್ವೀಟ್ ಮಾಡಿದ್ದಾರೆ.
ನಾನು ಸಿಎಂ ಜೊತೆ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು IAF ಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.