ವಿಶಾಖಪಟ್ಟಣಂ: ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಅನಾಥಾಶ್ರಮದಲ್ಲಿ ಸೋಮವಾರ ಶಂಕಿತ ಆಹಾರ ವಿಷದಿಂದ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ.
ಕೋಟೌರತ್ಲಾ ಮಂಡಲ ವ್ಯಾಪ್ತಿಯ ಕೈಲಾಸ ಪಟ್ಟಣದ ಅನಾಥಾಶ್ರಮದಲ್ಲಿ ಭಾನುವಾರ ಸಮೋಸ ತಿಂದ 27 ಮಂದಿ ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ನಾಲ್ವರು ಅನಕಾಪಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸೋಮವಾರ ಮೃತಪಟ್ಟಿದ್ದಾರೆ.
ಮಕ್ಕಳನ್ನು ಒಂದನೇ ತರಗತಿಯ ವಿದ್ಯಾರ್ಥಿ ಜೋಶುವಾ ಮತ್ತು ಮೂರನೇ ತರಗತಿಯಲ್ಲಿ ಓದುತ್ತಿರುವ ಭವಾನಿ ಮತ್ತು ಶ್ರದ್ಧಾ ಎಂದು ಗುರುತಿಸಲಾಗಿದೆ. ಉಳಿದ 24 ಮಂದಿ ನರಸೀಪಟ್ನಂ ಮತ್ತು ಅನಕಾಪಲ್ಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಲ್ಲಿ ಏಳು ಮಂದಿಯನ್ನು ನರಸೀಪಟ್ಟಣಂ ಏರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, 17 ಮಂದಿಯನ್ನು ಅನಕಪಲ್ಲಿ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ನಾಲ್ವರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಗೆ(ಕೆಜಿಹೆಚ್) ಸ್ಥಳಾಂತರಿಸಲಾಗಿದೆ.
ಅನಾಥಾಶ್ರಮವನ್ನು ಎನ್‌ಜಿಒ ನಡೆಸುತ್ತಿದೆ. ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 60 ಮಕ್ಕಳು ಓದುತ್ತಿದ್ದಾರೆ. ಅನಕಾಪಲ್ಲಿ ಜಿಲ್ಲಾಧಿಕಾರಿ ಕೆ. ವಿಜಯಾ ಅವರು ಘಟನೆಯ ತನಿಖೆಗೆ ಆದೇಶಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿ ಅಪ್ಪಾರಾವ್ ತನಿಖೆ ಕೈಗೊಂಡಿದ್ದಾರೆ. ಆಹಾರ ತಯಾರಿಕೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸದಿರುವುದು ದುರಂತಕ್ಕೆ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಆರೋಗ್ಯ ಸಚಿವ ವೈ.ಸತ್ಯಕುಮಾರ್ ಹಾಗೂ ಅನಕಾಪಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಅಲ್ಲೂರಿ ಸೀತಾರಾಮರಾಜು ಅವರೊಂದಿಗೆ ಮಾತನಾಡಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಲಾಗಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸುವಂತೆ ಕೋರುತ್ತೇನೆ ಎಂದು ಲೋಕೇಶ್ ತಿಳಿಸಿದ್ದಾರೆ.