ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ(OBC) ಶೇಕಡ 27 ರಷ್ಟು ಮೀಸಲಾತಿ ನೀಡಲಾಗುತ್ತದೆ. ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (Economically Weaker Sections -EWS) ಶೇಕಡ 10 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಈ ಶೈಕ್ಷಣಿಕ ವರ್ಷದಿಂದ ಎಂಬಿಬಿಎಸ್, ಎಂಡಿ, ಎಂಎಸ್, ಬಿಡಿಎಸ್, ಎಂಡಿಎಸ್ ಮತ್ತು ಡಿಪ್ಲೊಮಾ ವೈದ್ಯಕೀಯ ಕೋರ್ಸ್ ಗಳಿಗೆ ಇದು ಅನ್ವಯಿಸುತ್ತದೆ.
ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯ ಸಂದರ್ಭದಲ್ಲಿ ಜಾತಿ ಮತ್ತು ಕೋಮು ದೊಡ್ಡ ಪಾತ್ರವಹಿಸುತ್ತವೆ. ಈ ತಿಂಗಳ ಆರಂಭದಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆ ವೇಳೆ ಈ ಸಮುದಾಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಮಂತ್ರಿಗಳ ಜಾತಿ ಮತ್ತು ಉಪಜಾತಿಯೊಂದಿಗೆ ವಿವರವಾದ ಮಾಹಿತಿಯನ್ನ ಮಾಧ್ಯಮಗಳಿಗೆ ಕಳುಹಿಸಿದಾಗ ಬಿಜೆಪಿ ಈ ಲೆಕ್ಕಾಚಾರವನ್ನು ಪ್ರದರ್ಶಿಸಿತ್ತು.
ಆರೋಗ್ಯ ಸಚಿವಾಲಯ ಮಾಹಿತಿ ಪ್ರಕಾರ, ಸೋಮವಾರ ನಡೆದ ಸಭೆಯಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರವನ್ನು ಒದಗಿಸಲು ಪಿಎಂ ಮೋದಿ ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳಿಗೆ ನಿರ್ದೇಶನ ನೀಡಿದ್ದರು. ಬುಧವಾರ, ಒಬಿಸಿ ಸಮುದಾಯದ ಬಿಜೆಪಿ ಸಂಸದರ ಗುಂಪು ಇದೇ ವಿಷಯದ ಬಗ್ಗೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿತ್ತು.
ಈ ನಿರ್ಧಾರದಿಂದ MBBS ನಲ್ಲಿ ಸುಮಾರು 1,500 ಮತ್ತು ಸ್ನಾತಕೋತ್ತರ ಪದವಿಯಲ್ಲಿ 2,500 OBC ವಿದ್ಯಾರ್ಥಿಗಳಿಗೆ ಮತ್ತು MBBS ನಲ್ಲಿ ಸುಮಾರು 550 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಸುಮಾರು 1,000 EWS ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.