ಫತೇಪುರ್: ನಮ್ಮ ದೇಶದಲ್ಲಿ ಒಂದೇ ವಾಹನದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜನರು ಪ್ರಯಾಣಿಸುವುದು ಮಾಮೂಲಿಯಾಗಿದೆ. ಅದರಲ್ಲೂ ಆಟೋರಿಕ್ಷಾದಲ್ಲಿ ಮೂವರು ಮಾತ್ರ ಪ್ರಯಾಣಿಸಬೇಕೆಂಬ ನಿಯಮ ಇದ್ದರೂ ನಾಲ್ಕು ಅಥವಾ ಐದು ಜನ ಪ್ರಯಾಣಿಸುತ್ತಾರೆ. ಆದರೆ, ಇಲ್ಲೊಂದೆಡೆ ಒಂದು ಚಿಕ್ಕ ರಿಕ್ಷಾದಲ್ಲಿ ಪ್ರಯಾಣಿಸಿರುವ ಜನರ ಸಂಖ್ಯೆ ನೋಡಿದ್ರೆ ಖಂಡಿತಾ ಶಾಕ್ ಆಗ್ತೀರಾ..!
ಹೌದು, ಆಟೋರಿಕ್ಷಾದಲ್ಲಿ ಐದಲ್ಲ, ಹತ್ತಲ್ಲ ಬರೋಬ್ಬರಿ 27 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದುದನ್ನು ಕಂಡು ಉತ್ತರ ಪ್ರದೇಶ ಪೊಲೀಸರು ಆಘಾತಕ್ಕೊಳಗಾಗಿದ್ದಾರೆ. ಯುಪಿಯ ಫತೇಪುರ್ ಜಿಲ್ಲೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಒಂದು ಇಂಚು ಕೂಡ ಚಲಿಸದೆ ಇಕ್ಕಟ್ಟಾಗಿ ಕುಳಿತಿರುವುದು ಕಂಡುಬಂದಿದೆ. ಪೊಲೀಸರು ಆಟೋ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಳಿಯುವಂತೆ ಹೇಳಿದ್ದಾರೆ. ಈ ವೇಳೆ ಒಬ್ಬರಾದ ಮೇಲೆ ಒಬ್ಬರು ಇಳಿಯುತ್ತಿದ್ದಂತೆ ಪೊಲೀಸರು ಶಾಕ್ ಗೆ ಒಳಗಾಗಿದ್ದಾರೆ. ಆಟೋವು ಕೇವಲ ಆರು ಜನರ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಚಾಲಕ ವೃದ್ಧರು, ಮಕ್ಕಳು ಸೇರಿದಂತೆ 27 ಜನರ ಪ್ರಾಣವನ್ನು ಪಣಕ್ಕಿಟ್ಟು ಆಟೋದಲ್ಲಿ ಕೂರಿಸಿದ್ದಾನೆ.
ಇನ್ನು ಪ್ರಕರಣ ಸಂಬಂಧ ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ವಿಡಿಯೋ ವೈರಲ್ ಆಗಿದ್ದು, 85,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 3000 ಕ್ಕೂ ಹೆಚ್ಚು ಮಂದಿ ಹಂಚಿಕೊಂಡಿದ್ದಾರೆ. ʼವಿಶ್ವ ಜನಸಂಖ್ಯಾ ದಿನ. ಸೇರಿಸುವುದು ಸುಲಭ ಆದರೆ ನಿರ್ವಹಿಸುವುದು ಕಷ್ಟʼ ಎಂದು ಬಳಕೆದಾರರೊಬ್ಬರು ರೀಟ್ವೀಟ್ ಮಾಡಿದ್ದಾರೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಪ್ರಯತ್ನ ಯಶಸ್ವಿಯಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಲೇವಡಿ ಮಾಡಿದ್ರು.