ರಾಜ್‌ಕೋಟ್: ಗುಜರಾತ್‌ನ ರಾಜ್‌ಕೋಟ್‌ನ ಕಲಾವಾಡ್ ರಸ್ತೆಯಲ್ಲಿರುವ ಟಿಆರ್‌ಪಿ ಗೇಮಿಂಗ್ ಜೋನ್‌ನಲ್ಲಿ ಶನಿವಾರ ಸಂಭವಿಸಿದ ಭಾರೀ ಬೆಂಕಿಯ ನಂತರ ಮಕ್ಕಳು, ವಿದ್ಯಾರ್ಥಿಗಳು ಸೇರಿ ಕನಿಷ್ಠ 27 ಜನ ಸಾವನ್ನಪ್ಪಿದ್ದಾರೆ.
ಸಂಜೆಯ ವೇಳೆ ಗೇಮಿಂಗ್ ಜೋನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ, ಅಧಿಕಾರಿಗಳು ಕ್ಷಿಪ್ರವಾಗಿ ಸ್ಪಂದಿಸಿ ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ.
ಇದುವರೆಗೆ 27 ಮೃತದೇಹಗಳು ಪತ್ತೆಯಾಗಿವೆ. ಬೆಂಕಿಯ ಕಾರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗುವುದು. ದುರಂತ ಘಟನೆಯ ನಂತರ ನಗರದ ಎಲ್ಲಾ ಗೇಮಿಂಗ್ ಜೋನ್ ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ.
ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ ಕೂಡ ಈ ದುರಂತದ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ದುರಂತ ಘಟನೆಯಿಂದ ತಾನು ನೊಂದಿದ್ದೇನೆ ಎಂದು ಹೇಳಿದ್ದಾರೆ.
ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಘಟನೆಯ ವಿವರ ಪಡೆದರು. ದುರಂತ ಘಟನೆಗೆ ಸಂತಾಪ ಸೂಚಿಸಿದ ಅವರು, ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂಗೆ ಸೂಚಿಸಿದ್ದಾರೆ.
ಗುಜರಾತ್ ಸಿಎಂ ಪರಿಹಾರ ಘೋಷಣೆ
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಾಜ್‌ಕೋಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತ ಹೃದಯ ವಿದ್ರಾವಕ ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು. ಘಟನೆಯ ತನಿಖೆಗೆ ಎಸ್‌ಐಟಿ ರಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಈ ದುರಂತ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ರಾಜ್‌ಕೋಟ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿಯಲ್ಲಿನ ಪ್ರಾಣಹಾನಿಯಿಂದ ತೀವ್ರ ದುಃಖವಾಗಿದೆ ಎಂದು ತಿಳಿಸಿದ್ದಾರೆ.