ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆ ಮೇಲಿನ ಕಬ್ಬಿಣದ ಶಟರ್ ಕುಸಿದು ಕನಿಷ್ಠ 27 ಜನರು ಗಾಯಗೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಪ್ರಮುಖ ಸೇತುವೆಯನ್ನು ಬಾರ್ಡರ್ ರೋಡ್ಸ್ ಆರ್ಗನೈಸೇಶನ್(BRO) ರಾಮ್‌ಗಢ-ಕೋಲ್ ಪುರದಲ್ಲಿ ದೇವಿಕಾ ನದಿಯ ಮೇಲೆ ನಿರ್ಮಿಸುತ್ತಿದೆ.
ಭಾನುವಾರ ಸಂಜೆ 4.15 ರ ಸುಮಾರಿಗೆ ಎರಡು ಪಿಲ್ಲರ್‌ಗಳಿಗೆ ಸಂಪರ್ಕ ಕಲ್ಪಿಸುವ ಕಬ್ಬಿಣದ ಶಟರಿಂಗ್ ಕುಸಿದು 27 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಿ ಎಲ್ಲಾ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿ(ಜಿಎಂಸಿ)ಗೆ ದಾಖಲಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು ಎಂದು ಸಾಂಬಾ ಡೆಪ್ಯೂಟಿ ಕಮಿಷನರ್ ಅನುರಾಧಾ ಗುಪ್ತಾ ಹೇಳಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ನಂತರ ಅವರು ರಕ್ಷಣಾ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡಿದರು. ನಂತರ ಅವರು ಸಮುದಾಯ ಆರೋಗ್ಯ ಕೇಂದ್ರ ರಾಮ್‌ಘರ್ ಮತ್ತು ವಿಜಯಪುರ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ನಮ್ಮ ಆದ್ಯತೆ ರಕ್ಷಣಾ ಕಾರ್ಯಾಚರಣೆಯಾಗಿತ್ತು. ಅಪಘಾತದ ಕಾರಣವನ್ನು ಪರಿಶೀಲಿಸಲು ಸೋಮವಾರ ವಿಚಾರಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.