ಅತ್ಯಾಚಾರ ಆರೋಪದ ಪ್ರಕರಣದಲ್ಲಿ 26 ವರ್ಷದಿಂದ ಜೈಲಿನಲ್ಲಿದ್ದ ಆರೋಪಿಗೆ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಬಿಡುಗಡೆ ಭಾಗ್ಯ ನೀಡಿದೆ.
ಅತ್ಯಾಚಾರ ಸಂತ್ರಸ್ತೆಯ ಹೇಳಿಕೆ, ಸಾಕ್ಯ್ಕದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡ ನಂತರ 26 ವರ್ಷದ ಹಳೆಯ ಅತ್ಯಾಚಾರ ಪ್ರಕರಣದಲ್ಲಿ ವ್ಯಕ್ತಿಯೊಬ್ಬನ ಶಿಕ್ಷೆಯನ್ನು ರದ್ದುಗೊಳಿಸಿದ್ದು ಜೈಲಿನಿಂದ ಬಿಡುಗಡೆ ಮಾಡಲು ಕೋರ್ಟ್ ನಿರ್ದೇಶಿಸಿದೆ.
ಜಸ್ಟಿಸ್ ಕರುಣೇಶ್ ಸಿಂಗ್ ಪವಾರ್ ಅವರ ಪೀಠವು ಬದುಕುಳಿದವರ ಸಾಕ್ಷ್ಯವು ವಿಶ್ವಾಸಾರ್ಹವಾಗಿಲ್ಲ ಮತ್ತು ಪ್ರಕರಣದಲ್ಲಿ ಯುವತಿಯು ಸಮ್ಮತಿಯ ಸೆಕ್ಸ್ ಮಾಡಿದ್ದಾಳೆ ಎಂದು ಹೇಳಿದೆ.
ಪೀಠವು ವೈದ್ಯಕೀಯ ವರದಿಯನ್ನು ಮೀರಿ ಆಕೆಯ ವಯಸ್ಸಿನ ಬಗ್ಗೆ ಸಾಕ್ಷ್ಯಾಧಾರಗಳ ಕೊರತೆಯನ್ನು ಎತ್ತಿ ತೋರಿಸಿದೆ. ಸಂತ್ರಸ್ತೆ ಘಟನೆಯ ವೇಳೆ 16 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಹೊಂದಿದ್ದಳೆಂದು ದೃಢಪಡಿಸಿದೆ. ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ನಡೆದ 1997 ರಲ್ಲಿ ಲೈಂಗಿಕ ಸಂಭೋಗಕ್ಕೆ ಒಪ್ಪಿಗೆಯ ವಯಸ್ಸು 16 ವರ್ಷವಾಗಿತ್ತು ಎಂದು ನ್ಯಾಯಾಲವು ಗಮನಿಸಿತು.
ಜನವರಿ 16, 1997 ರಂದು ಆರೋಪಿ ಲಲ್ಲಾ ತನ್ನ ಮಗಳನ್ನು ಕರೆದೊಯ್ದಿದ್ದು ಆಕೆ ಎಲ್ಲಿದ್ದಾಳೆಂದು ತಿಳಿದಿಲ್ಲ ಎಂದು ಆರೋಪಿಸಿ ಹುಡುಗಿಯ ತಂದೆ ಲಕ್ನೋ ಪೊಲೀಸರಿಗೆ ದೂರು ನೀಡಿದ್ದರು. ಜನವರಿ 27, 1997 ರಂದು ಯುವತಿ ವಾಪಸ್ ಬಂದ ನಂತರ ಆಕೆಯನ್ನು ಅತ್ಯಾಚಾರ ಮಾಡಿರುವುದಾಗಿ ಲಲ್ಲಾ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ವಿಚಾರಣೆಯ ನಂತರ ಆರೋಪಿಯನ್ನು ಐಪಿಸಿಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ದೋಷಿ ಎಂದು ಘೋಷಿಸಲಾಯಿತು. ನಂತರ ಲಲ್ಲಾ ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತೆರಳಿದರು.
ಪ್ರಸ್ತುತಪಡಿಸಿದ ಸತ್ಯಗಳು, ಸಂದರ್ಭಗಳು ಮತ್ತು ಪುರಾವೆಗಳನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್, 13 ದಿನಗಳ ನಂತರ ಚೇತರಿಸಿಕೊಂಡು ಬಂದ ಯುವತಿ ತನ್ನ ವಿರುದ್ಧ ಅತ್ಯಾಚಾರವಾಗಿದೆ ಎಂದು ಧ್ವನಿಯೆತ್ತಲಿಲ್ಲ. ಆಕೆಯ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ದೃಢೀಕರಿಸಿದ ಅಂಶಗಳಿಲ್ಲ. ಯುವತಿಗೆ ಲೈಂಗಿಕ ಸಂಭೋಗ ನಡೆಸುವುದು ಅಭ್ಯಾಸವಾಗಿತ್ತು ಎಂಬುದು ವರದಿಯಲ್ಲಿ ಗೊತ್ತಾಗಿದೆ ಎಂದು ಪೀಠ ಗಮನಿಸಿತು. ಜೊತೆಗೆ ಕ್ರಾಸ್ ಎಕ್ಸಾಮಿನೇಷನ್ ವೇಳೆ ಯುವತಿ ತಾನು ಸ್ವಇಚ್ಚೆಯಿಂದ ವ್ಯಕ್ತಿಯೊಂದಿಗೆ ಹೋಗಿದ್ದಾಗಿ ಹೇಳಿರೋದನ್ನ ನ್ಯಾಯಾಲಯ ಗಮನಿಸಿ ಈ ತೀರ್ಪು ನೀಡಿದೆ.