ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯು ಇಂದಿಗೆ 14 ವರ್ಷಗಳನ್ನು ಪೂರೈಸಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಎ ತೋಯ್ಬಾದ 10 ಮಂದಿ ಉಗ್ರರು ವಾಣಿಜ್ಯ ನಗರಿ ಮುಂಬೈನಾದ್ಯಂತ 12 ದಾಳಿಗಳನ್ನು ನಡೆಸಿ ಅನೇಕರು ಪ್ರಾಣ ಕಳೆದುಕೊಳ್ಳುವುದಕ್ಕೆ ಕಾರಣರಾದರು.
ತಾಜ್ಮಹಲ್ ಪ್ಯಾಲೇಸ್ ಹೋಟೆಲ್ನಲ್ಲಿ ನಡೆದ ಭಯೋತ್ಪಾದಕ ದಾಳಿ
2008 ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 15 ದೇಶಗಳ 166 ಮಂದಿ ಜೀವ ತೆತ್ತಿದ್ದರು. ಲಷ್ಕರ್ ಎ ತೋಯ್ಬಾ ಸಂಘಟನೆಯ ಸದಸ್ಯರು ತಾಜ್ಮಹಲ್ ಪ್ಯಾಲೇಸ್ ಹೋಟೆಲ್, ಟ್ರೈಡೆಂಟ್ ಹೋಟೆಲ್, ನಾರಿಮನ್ ಹೌಸ್, ಮೆಟ್ರೋ ಚಿತ್ರಮಂದಿರ ಹಾಗೂ ಛತ್ರಪತಿ ಶಿವಾಜಿ ಟರ್ಮಿನಸ್ನಲ್ಲಿ ಬಾಂಬ್ ದಾಳಿ ನಡೆಸಿದ್ದರು.
2008ರ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯದ್
2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದವನು ಉಗ್ರ ಹಫೀಜ್ ಸೈಯದ್. ಪಾಕಿಸ್ತಾನವು ಮೊದಲು ಆತನನ್ನು ಬಂಧಿಸಿ ಬಳಿಕ ಗೃಹಬಂಧನದಿಂದ ಮುಕ್ತಿ ನೀಡಿತ್ತು.
ಮುಂಬೈ ಭಯೋತ್ಪಾದಕ ದಾಳಿಯ ಹೀರೋಗಳು
ಈ ದುರಂತ ನಡೆದು 2 ದಿನಗಳ ಬಳಿಕ ಅಂದರೆ 2008ರ ನವೆಂಬರ್ 28ರಂದು ತಾಜ್ ಹೋಟೆಲ್ ಹೊರತುಪಡಿಸಿ ಉಳಿದೆಲ್ಲ ಸೈಟ್ಗಳನ್ನು ಮುಂಬೈ ಪೊಲೀಸರು ಹಾಗೂ ಭದ್ರತಾ ಪಡೆಗಳು ವಶಪಡಿಸಿಕೊಂಡವು.
ಆಪರೇಷನ್ ಬ್ಲಾಕ್ ಟೊರ್ನಾಡೋ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ದಾಳಿಕೋರರನ್ನು ಹತ್ಯೆಗೈಯುವ ಮೂಲಕ ದುಸ್ವಪ್ನದಂತೆ ಕಾಡಿದ್ದ ಉಗ್ರರನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿತ್ತು.
10 ಭಯೋತ್ಪಾದಕರ ಪೈಕಿ ಒಂಭತ್ತು ಮಂದಿಯನ್ನು ಭದ್ರತೆ ಪಡೆ ಕೊಂದು ಹಾಕುವಲ್ಲಿ ಯಶಸ್ವಿಯಾಗಿತ್ತು.