ಸರ್ಕಾರದ ಅಂಗ ಸಂಸ್ಥೆಗಳು ಎಷ್ಟು ನಿಧಾನ ಗತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇಲ್ಲೊಂದು ವಿಶೇಷ ಪ್ರಕರಣದಲ್ಲಿ ಗೋವಾ ವಿಶ್ವವಿದ್ಯಾಲಯ 26 ವರ್ಷಗಳ ಹಿಂದೆ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ರಾಜೀನಾಮೆಗೆ ಈಗ ಅಂಗೀಕಾರ ನೀಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಹೌದು, ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಹಾಗೂ ಭಾರತೀಯ ಸಮಾಜ ವಿಜ್ಞಾನ ಅಕಾಡೆಮಿ ಅಧ್ಯಕ್ಷರೂ ಆಗಿರುವ ಪ್ರೊ. ಮುಜಾಫರ್ ಅಸ್ಸಾದಿಯವರು ಈ ಹಿಂದೆ ಗೋವಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದು 1997ರಲ್ಲಿ ರಾಜೀನಾಮೆ ಸಲ್ಲಿಸಿದ್ದರು.
ಪ್ರೊ. ಅಸ್ಸಾದಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಉದ್ಯೋಗಕ್ಕೆ ಸೇರುವ ಮುನ್ನ ತಾವು ಗೋವಾ ವಿಶ್ವವಿದ್ಯಾಲಯದ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿರುವ ವಿಷಯವನ್ನು ತಿಳಿಸಿದ್ದರು. ಹೀಗಾಗಿ ಇವರ ನೇಮಕಕ್ಕೆ ಯಾವುದೇ ಅಡ್ಡಿಯಾಗಿರಲಿಲ್ಲ.
ಇದೀಗ ಅಸ್ಸಾದಿಯವರಿಗೆ ಜೂನ್ 5 ರಂದು ಗೋವಾ ವಿಶ್ವವಿದ್ಯಾಲಯದಿಂದ ಪತ್ರವೊಂದು ಬಂದಿದ್ದು, ಇದರಲ್ಲಿ ನಿಮ್ಮ ರಾಜೀನಾಮೆಯನ್ನು ಶಿಕ್ಷಣ ಮಂಡಳಿ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ತಿಳಿಸಲಾಗಿದೆ. 26 ವರ್ಷದ ಹಿಂದೆ ತಾವು ಸಲ್ಲಿಸಿದ್ದ ರಾಜೀನಾಮೆ ಪತ್ರಕ್ಕೆ ಅಂಗೀಕಾರ ದೊರೆತಿರುವ ಕುರಿತು ಈಗ ಪತ್ರ ಬಂದಿರುವುದು ಸ್ವತಃ ಅಸ್ಸಾದಿಯವರಿಗೆ ಅಚ್ಚರಿ ಮೂಡಿಸಿದೆ.