ನವದೆಹಲಿ: ಫೇಸ್ಬುಕ್ ನಲ್ಲಿ ಪರಿಚಿತವಾಗಿದ್ದ ಯುವಕನನ್ನು ನಂಬಿ ಆತನೊಂದಿಗೆ ಹೋಗಿದ್ದ ಮಹಿಳೆಯ 25 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅನಾರೋಗ್ಯದಿಂದಾಗಿ ದೂರು ದಾಖಲಿಸಲು ವಿಳಂಬವಾಗಿದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. 4 ವರ್ಷಗಳಿಂದ ದೆಹಲಿಯಲ್ಲಿ ವಾಸವಾಗಿರುವ ಮಹಿಳೆಗೆ ಫೇಸ್ಬುಕ್ ಮೂಲಕ ಸಾಗರ್ ಎಂಬ ಯುವಕ ಪರಿಚಯವಾಗಿದ್ದಾನೆ. ಇಬ್ಬರೂ ಪರಿಚಯದ ನಂತರದಲ್ಲಿ ದೂರವಾಣಿ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದಾರೆ.
ನಂತರದಲ್ಲಿ ಮಹಿಳೆಯನ್ನು ಮದುವೆಯಾಗುವುದಾಗಿ ಸಾಗರ್ ಪ್ರಸ್ತಾಪಿಸಿದ್ದಾನೆ. ಅಲ್ಲದೆ, ತನ್ನ ಪೋಷಕರನ್ನು ಭೇಟಿಯಾಗಲು ಹೊಡಾಲ್ ಗೆ ಬರುವಂತೆ ಕೇಳಿಕೊಂಡಿದ್ದಾನೆ. ಆತನ ಮಾತು ನಂಬಿದ ಮಹಿಳೆ ಮೇ 3 ರಂದು ಭೇಟಿಯಾಗಲು ಹೊಡಾಲ್ ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ರಾಮಗಢ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.
ಕಾಡಿನ ಟ್ಯೂಬ್ ವೆಲ್ ಬಳಿ ಸಾಗರ್ ಸಹೋದರ ಮತ್ತು ಆತನ ಸ್ನೇಹಿತರ ಗುಂಪು ಮದ್ಯ ಸೇವಿಸುತ್ತಿದ್ದರು. ಮಹಿಳೆ ಸಾಗರ್ ಜೊತೆಗೆ ಸ್ಥಳಕ್ಕೆ ತಲುಪಿದಾಗ ಆರೋಪಿಗಳು ಅತ್ಯಾಚಾರ ಎಸಗಿದ್ದಾರೆ. ಮರುದಿನ ಆಕೆಯನ್ನು ಆಕಾಶ್ ಎಂಬ ಸ್ಕ್ರಾಪ್ ವ್ಯಾಪಾರಿಯ ಬಳಿಗೆ ಕರೆದೊಯ್ಯಲಾಗಿದ್ದು, ಅಲ್ಲಿ ಐವರು ಪುರುಷರು ಅತ್ಯಾಚಾರ ಎಸಗಿದ್ದಾರೆ.
ಪದೇ ಪದೇ ಲೈಂಗಿಕ ದೌರ್ಜನ್ಯದ ಬಳಿಕ ಮಹಿಳೆಯ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆಕೆಯನ್ನು ಬಾದರ್ ಪುರ ಗಡಿಯ ಸಮೀಪ ಎಸೆದು ಪರಾರಿಯಾಗಿದ್ದಾರೆ. ಮೇ 12 ರಂದು ಮಹಿಳೆ ಹಾಸನ್ ಪುರ್ ಪೊಲೀಸರಿಗೆ ದೂರು ನೀಡಿದ್ದು, ಅನಾರೋಗ್ಯದ ಕಾರಣ ವಿಳಂಬವಾಗಿ ದೂರು ನೀಡಿರುವುದಾಗಿ ಮಹಿಳೆ ತಿಳಿಸಿದ್ದಾಳೆ. ಠಾಣಾಧಿಕಾರಿ ರಾಜೇಶ್ ಶುಕ್ರವಾರ ಆರೋಪಿ ಸಾಗರ್ ನನ್ನು ಬಂಧಿಸಿದ್ದಾರೆ. ಇತರ ಆರೋಪಿಗಳ ಬಂಧಿಸಲು ಕ್ರಮಕೈಗೊಳ್ಳಲಾಗಿದೆ.