ಬೆಂಗಳೂರು: ಮರಳು ಗಣಿಗಾರಿಕೆಯಿಂದ ಸಂಗ್ರಹವಾಗುವ ರಾಜಧನದ ಮೊತ್ತದಲ್ಲಿ ಗ್ರಾಮ ಪಂಚಾಯಿತಿಗಳಿಗೆ ಶೇಕಡ 25ರಷ್ಟು ಮೊತ್ತ ಲಭ್ಯವಾಗಲಿದೆ. ಶೇಕಡ 25 ರಷ್ಟು ಮೊತ್ತವನ್ನು ಆಯಾ ತಾಲೂಕಿನ ಇನ್ನಿತರ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುವುದು.
2022ರ ಏಪ್ರಿಲ್ 1ರಿಂದ 2023ರ ಮಾರ್ಚ್ 31ರವರೆಗೆ ರಾಜ್ಯದ ನದಿ ಪಾತ್ರದಲ್ಲಿ ನಡೆದ ಮರಳು ಗಣಿಗಾರಿಕೆಯಿಂದ ಸಂಗ್ರಹವಾದ ರಾಜ್ಯದನದ ಮೊತ್ತ ಹಂಚಿಕೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದ್ದು, ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತಿದೆ. ಮರಳು ಗಣಿಗಾರಿಕೆ ನಡೆಯುವ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಾಗಲಕೋಟೆ, ಗದಗ, ದಾವಣಗೆರೆ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಕಲಬುರಗಿ, ರಾಯಚೂರು, ಬಳ್ಳಾರಿ, ವಿಜಯನಗರ, ಬೆಳಗಾವಿ, ಕೊಪ್ಪಳ, ಯಾದಗಿರಿ, ಉತ್ತರ ಕನ್ನಡ ಜಿಲ್ಲೆ ಸೇರಿ ವಿವಿಧೆಡೆ 59 ತಾಲೂಕುಗಳ ಗ್ರಾಮ ಪಂಚಾಯಿತಿಗಳಿಗಾಗಿ 3.59 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಮರಳು ಗಣಿಗಾರಿಕೆಯಿಂದ ನದಿ ಪಾತ್ರದ ಗ್ರಾಮಗಳಲ್ಲಿ ರಸ್ತೆಗಳು ಹಾಳಾಗುತ್ತಿದ್ದು, ರಾಜಸ್ವದಲ್ಲಿ ರಸ್ತೆ ದುರಸ್ತಿಗೆ ಪಾಲು ಕೊಡಬೇಕೆಂದು ಗ್ರಾಮ ಪಂಚಾಯತ್ ಗಳು ಒತ್ತಾಯ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಆಯಾ ಗ್ರಾಮ ಪಂಚಾಯಿತಿಗಳಿಗೆ ಶೇಕಡ 25ರಷ್ಟು ಮೊತ್ತ ನೀಡಲಾಗುವುದು. 25% ರಷ್ಟು ಮೊತ್ತವನ್ನು ಆಯಾ ತಾಲೂಕಿನ ಇನ್ನಿತರೆ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುವುದು ಎಂದು ಹೇಳಲಾಗಿದೆ.