ಪೋಷಕರಿಗೆ ತಮ್ಮ ಮಕ್ಕಳ ಮದುವೆ ಆಡಂಬರದಿಂದ ನೆರವೇರಬೇಕು ಎಂಬ ಆಸೆಯಿರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿದ್ದರೆ ಅವರ ಮದುವೆಯನ್ನು ಅದ್ಧೂರಿಯಾಗಿ ಮಾಡಿ ಗಂಡನ ಮನೆಗೆ ಕಳಿಸಬೇಕೆಂದು ತಂದೆ-ತಾಯಿ ಕನಸು ಕಂಡಿರುತ್ತಾರೆ. ಮಗಳಿಗೆ ಒಳ್ಳೆಯ ವರ ಸಿಗಬೇಕು ಅನ್ನೋದು ಕೂಡ ಹೆತ್ತವರ ಆಸೆ. ದೌಸಾ ಜಿಲ್ಲೆಯಲ್ಲಿ ಹೆತ್ತವರೇ ತಮ್ಮ 25 ವರ್ಷದ ಮಗಳನ್ನು 55 ವರ್ಷದ ವ್ಯಕ್ತಿಗೆ ಕೊಟ್ಟು ಮದುವೆ ಮಾಡಿದ್ದಾರೆ.
25 ವರ್ಷದ ವಿನೀತಾ ಅಂಗವಿಕಲೆ, ಆಕೆಗೆ ನಡೆಯಲು ಸಾಧ್ಯವಾಗುವುದಿಲ್ಲ. 55 ವರ್ಷದ ವ್ಯಕ್ತಿಯೊಬ್ಬ ಆಕೆಯನ್ನು ಮದುವೆಯಾಗಲು ಮುಂದೆ ಬಂದಿದ್ದ. ತಮ್ಮ ಕಾಲಾವಧಿ ಬಳಿಕ ಮಗಳ ಗತಿಯೇನು ಎಂಬ ಚಿಂತೆಗೆ ಬಿದ್ದ ಪೋಷಕರು ಅವಳಿಗೆ ಮದುವೆ ಮಾಡಲು ಹುಡುಕಾಟ ಆರಂಭಿಸಿದರು. ವಿನೀತಾಗೆ ಗಂಡು ಸಿಗಲಿಲ್ಲವೆಂದಲ್ಲ, ಗಂಡು ಸಿಕ್ಕರೂ ಅಂಗವಿಕಲರೇ ಆಗಿದ್ದರು. ಅಂಗವಿಕಲ ಹುಡುಗ ಮಗಳು ವಿನಿತಾಳನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬ ಪ್ರಶ್ನೆ ಹೆತ್ತವರಲ್ಲಿ ಮೂಡಿತ್ತು. ಇದರಿಂದ ಮನನೊಂದ ಕುಟುಂಬಸ್ಥರು ವಿನಿತಾ ಮದುವೆಯ ನಿರೀಕ್ಷೆಯನ್ನು ಕೈಬಿಟ್ಟರು.
ಇತ್ತೀಚೆಗೆ 55 ವರ್ಷದ ಬಲ್ಲು ಅಲಿಯಾಸ್ ಬಲರಾಮ್ ಎಂಬಾತ ವಿನೀತಾಳನ್ನು ಮದುವೆಯಾಗುವುದಾಗಿ ಪ್ರಸ್ತಾಪ ಮಾಡಿದ್ದ. ವಿನೀತಾ ವಯಸ್ಸು 25 ಮತ್ತು ವರನ ವಯಸ್ಸು 55. ಈ ಜೋಡಿ ಹೇಗಿರುತ್ತೆ ಅಂತ ಕುಟುಂಬಸ್ಥರು ತಲೆ ಕೆಡಿಸಿಕೊಂಡಿದ್ದರು. ಆದರೆ ಮಗಳ ಭವಿಷ್ಯದ ದೃಷ್ಟಿಯಿಂದ ಆತನಿಗೆ ಮದುವೆ ಮಾಡಿಕೊಡಲು ಒಪ್ಪಿದ್ದಾರೆ. ಸಂಪ್ರದಾಯಬದ್ಧವಾಗಿ ವಿನೀತಾಳನ್ನು ಆತನಿಗೆ ಮದುವೆ ಮಾಡಿಕೊಟ್ಟಿದ್ದಾರೆ.
ವಿನೀತಾಗೆ ನಡೆಯಲು ಸಾಧ್ಯವಿಲ್ಲದೇ ಇದ್ದಿದ್ದರಿಂದ ಆಕೆಯ ಸಹೋದರ ಅವಳನ್ನು ಎತ್ತಿಕೊಂಡು ಸಪ್ತಪದಿಗೆ ನೆರವಾಗಿದ್ದಾನೆ. ವಿಕಲಚೇತನೆಯಾಗಿರೋ ಮಗಳ ಮದುವೆ ಕೊನೆಗೂ ನೆರವೇರಿತಲ್ಲ ಅನ್ನೋ ಸಮಾಧಾನ ಹೆತ್ತವರಲ್ಲಿತ್ತು. ಆದರೆ ಮಗಳ ಎರಡು ಪಟ್ಟು ವಯಸ್ಸಾಗಿರೋ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದು ಅತೀವ ನೋವು ತಂದಿತ್ತು.