ರೈಲ್ವೆ ಹಳಿಯಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ 24 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ. ಈ ದುರಂತ ಮಂಗಳವಾರ ಸಂಜೆ ಥಾಣೆ ಜಿಲ್ಲೆಯ ಅಮರ್‌ನಾಥ್ ಮತ್ತು ಬದ್ಲಾಪುರ ನಿಲ್ದಾಣಗಳ ನಡುವೆ ನಡೆದಿದೆ.
ಮೂಲತಃ ಪಶ್ಚಿಮ ಬಂಗಾಳದವರಾದ ಸಾಹಿರ್ ಅಲಿ ಎಂಬ ಯುವಕ ಅಮರ್‌ನಾಥ್‌ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಮಂಗಳವಾರ ಸಂಜೆ ಅವರು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಅಮರ್‌ನಾಥ್ ಮತ್ತು ಬದ್ಲಾಪುರ ನಿಲ್ದಾಣಗಳ ನಡುವಿನ ಫ್ಲೈಓವರ್ ಕೆಳಗೆ ರೈಲ್ವೆ ಹಳಿಯ ಬಳಿ ಸೆಲ್ಫಿ ಮತ್ತು ಗ್ರೂಪ್ ಫೋಟೋಗಳನ್ನು ತೆಗೆದುಕೊಳ್ಳಲು ತೆರಳಿದ್ದರು.
ಈ ವೇಳೆ ಸಾಹಿರ್ ಅಲಿ ಸೆಲ್ಫಿ ತೆಗೆದುಕೊಳ್ಳುವಲ್ಲಿ ಮಗ್ನರಾಗಿದ್ದಾಗ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೊಯ್ನಾ ಎಕ್ಸ್‌ಪ್ರೆಸ್ ರೈಲನ್ನು ಗಮನಿಸಲಿಲ್ಲ. ರೈಲು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಲ್ಯಾಣ್ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ದುರಂತದ ಹಿನ್ನೆಲೆಯಲ್ಲಿ ರೈಲ್ವೆ ಹಳಿಯಲ್ಲಿ ಅತಿಕ್ರಮಣ ಮಾಡದಂತೆ ಮತ್ತು ಸೆಲ್ಫಿ ತೆಗೆದುಕೊಳ್ಳುವಂತಹ ಅಪಾಯಕಾರಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳದಂತೆ ರೈಲ್ವೆ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದೆ.