ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಅಮೂಲ್ಯವಾದದ್ದು. ಉತ್ತಮ ಶಿಕ್ಷಕರು ಮಕ್ಕಳ ದೌರ್ಬಲ್ಯವನ್ನು ಹೋಗಲಾಡಿಸಿ ಅವರನ್ನು ಯಶಸ್ವಿಗೊಳಿಸುತ್ತಾರೆ. ಮಕ್ಕಳು ಹಾಗೂ ಶಿಕ್ಷಕರ ಬಾಂಧವ್ಯ ಅದೆಷ್ಟರ ಮಟ್ಟಿಗಿರುತ್ತದೆ ಎಂದರೆ, ಕೆಲವೊಮ್ಮೆ ಸರ್ಕಾರಿ ಶಾಲೆಯ ಶಿಕ್ಷಕರ ವರ್ಗಾವಣೆಯ ಸುದ್ದಿ ಬಂದರೆ ಮಕ್ಕಳಷ್ಟೇ ಅಲ್ಲ ಇಡೀ ಗ್ರಾಮವೇ ಅವರನ್ನು ಕಣ್ಣೀರಿನೊಂದಿಗೆ ಬೀಳ್ಕೊಡುತ್ತದೆ. ಭಾರತದಲ್ಲಿ ಕೆಲವು ಶಿಕ್ಷಕರು ತಮ್ಮ ಸಂಪೂರ್ಣ ವೃತ್ತಿ ಜೀವನದಲ್ಲಿ ಅಂದರೆ ನಿವೃತ್ತಿಯ ದಿನದವರೆಗೆ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ್ದಾರೆ.
ಆದರೆ ಇಟಲಿಯ ಶಿಕ್ಷಕರೊಬ್ಬರು 24 ವರ್ಷಗಳ ವೃತ್ತಿಜೀವನದಲ್ಲಿ 20 ವರ್ಷಗಳ ಕಾಲ ರಜೆ ತೆಗೆದುಕೊಂಡಿದ್ದಾರೆ. 56 ವರ್ಷದ ಶಿಕ್ಷಕಿ ಸಿಂಜಿಯೊ ಪಾವೊಲಿನಾ ಡಿ ಲಿಯೊ ಅವರನ್ನು ಸಾಹಿತ್ಯ ಮತ್ತು ತತ್ವಶಾಸ್ತ್ರ ವಿಷಯವನ್ನು ಕಲಿಸಲು ನೇಮಿಸಲಾಗಿದೆ. ಪ್ರಾರಂಭದಲ್ಲಿ ಒಂದಷ್ಟು ದಿನ ನಿರಂತರವಾಗಿ ಪಾಠ ಹೇಳಿಕೊಟ್ಟ ಈಕೆ ನಂತರ ಅನಾರೋಗ್ಯದ ನೆಪ ಹೇಳಲಾರಂಭಿಸಿದ್ದಾಳೆ. ಅನಾರೋಗ್ಯ ಅಥವಾ ಕೌಟುಂಬಿಕ ಸಮಸ್ಯೆಗಳ ನೆಪದಲ್ಲಿ ಹೆಚ್ಚಾಗಿ ರಜೆ ತೆಗೆದುಕೊಳ್ಳುತ್ತಿದ್ದಳು. ವಿದ್ಯಾರ್ಥಿಗಳ ಓದಿನ ಬಗ್ಗೆ ಆಸಕ್ತಿ ವಹಿಸಲೇ ಇಲ್ಲ. ಹಲವು ಬಾರಿ ಹೊಸದನ್ನು ಕಲಿಯಲು ಸಮ್ಮೇಳನಕ್ಕೆ ಹೋಗುವ ನೆಪದಲ್ಲಿ ನಾಪತ್ತೆಯಾಗುತ್ತಿದ್ದಳು.
‘ಇಟಲಿಯ ಕೆಟ್ಟ ಉದ್ಯೋಗಿ‘
ಕೆಲವು ದಿನಗಳ ಹಿಂದೆಯೂ ಅನಾರೋಗ್ಯದ ಹೆಸರಲ್ಲಿ ರಜೆ ಹಾಕಿದ್ದ ಆಕೆ ಬೀಚ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಳು. ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು ಕೆಲಸವನ್ನೇ ಕಳೆದುಕೊಂಡಿದ್ದಾಳೆ. ಇಪ್ಪತ್ತು ವರ್ಷಗಳಿಂದ ಕರ್ತವ್ಯಕ್ಕೆ ರಜೆ ಹಾಕಿ ಈ ಅವಧಿಯಲ್ಲಿ ಪೂರ್ಣ ಸಂಬಳ ಪಡೆದಿದ್ದಾಳೆ. ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿರೋ ಈ ಶಿಕ್ಷಕಿ ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ ಎಂಬ ಅಪಖ್ಯಾತಿಗೂ ಪಾತ್ರಳಾಗಿದ್ದಾಳೆ.
ವಿದ್ಯಾರ್ಥಿಗಳೂ ಶಿಕ್ಷಕಿಯ ವರ್ತನೆ ಬಗ್ಗೆ ದೂರು ನೀಡಿದ್ದರು. ಅಂತಿಮವಾಗಿ ಜೂನ್ 22 ರಂದು ಆಕೆಯನ್ನು ಕೆಲಸದಿಂದ ವಜಾ ಮಾಡಲಾಯಿತು. ಕರ್ತವ್ಯಭ್ರಷ್ಟ ಶಿಕ್ಷಕಿ ಕೂಡ ಹಠಮಾರಿ, ಮೂರು ಡಿಗ್ರಿಗಳನ್ನು ಹೊಂದಿರುವ ಆಕೆ ನ್ಯಾಯಾಲಯದ ಮೆಟ್ಟಿಲೇರಿದ್ದಳು. ವಿಚಾರಣೆ ವೇಳೆ ಆಕೆ ಈ ಕೆಲಸಕ್ಕೆ ಅನರ್ಹಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.