ಎಂಥಾ ಕುಂಭಕರ್ಣನೇ ಆಗಿದ್ದರೂ ಹೊಟ್ಟೆ ಹಸಿದಾಗ ನಿದ್ದೆಯಿಂದ ಎದ್ದೇಳುತ್ತಾರೆ. ಆದ್ರೆ ವ್ಯಕ್ತಿಯೊಬ್ಬ 24 ದಿನಗಳ ಕಾಲ ಗಾಢ ನಿದ್ರೆಯಲ್ಲಿ ಮಲಗಿ ಅಚ್ಚರಿ ಮೂಡಿಸಿದ್ದಾನೆ. ಜಪಾನ್ ಮೂಲದ ಈತ 24 ದಿನಗಳ ಕಾಲ ಆಹಾರ, ನೀರು ಏನನ್ನೂ ಸೇವಿಸಿಲ್ಲ. ಗಾಢ ನಿದ್ದೆಯಲ್ಲೇ ಮಲಗಿಬಿಟ್ಟಿದ್ದ. ಆದರೂ ಆತ ಬದುಕುಳಿದಿದ್ದು ಹೇಗೆ ಅನ್ನೋದೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
2006ರಲ್ಲಿ ನಡೆದಿರುವ ಘಟನೆ ಇದು. 35 ವರ್ಷದ ವ್ಯಕ್ತಿಯೊಬ್ಬ ವೈಜ್ಞಾನಿಕ ಲೋಕಕ್ಕೇ ಸವಾಲೆಸೆದಿದ್ದಾನೆ. ಇದು ವಿಜ್ಞಾನದ ಗ್ರಹಿಕೆಯನ್ನೂ ಮೀರಿದ್ದು. ಮಿತ್ಸುಟಾಕ ಉಚಿಕೋಶಿ ಎಂಬಾತ ಮೌಂಟ್ ರೋಕೊದಿಂದ ಕಾಲ್ನಡಿಗೆಯಲ್ಲಿ ಹಿಂತಿರುಗಲು ನಿರ್ಧರಿಸಿದ್ದ. ಆದರೆ ದಾರಿಯ ಮಧ್ಯದಲ್ಲಿ ಕಳೆದು ಹೋಗಿದ್ದಾನೆ. ನದಿಯ ಬಳಿ ಕಾಲು ಜಾರಿ ಬಿದ್ದಿದ್ದರಿಂದ ಆತನ ಸೊಂಟದ ಮೂಳೆ ಮುರಿದಿತ್ತು. ಆದರೂ ಛಲ ಬಿಡದೆ ಆತ ಮುಂದೆ ಸಾಗುತ್ತಲೇ ಇದ್ದ.
ಕೆಲವು ದಿನಗಳ ನಂತರ ಆಯಾಸದಿಂದ ಅವನಿಗೆ ನಿದ್ರೆ ಬರಲಾರಂಭಿಸಿತು. ಅವನು ಒಂದು ಹೊಲದ ಬಳಿ ಹೋಗಿ ನಿದ್ರೆಗೆ ಜಾರಿದ. ಆ ವ್ಯಕ್ತಿಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದ. ಆತನಿಗೆ 24 ದಿನಗಳ ನಂತರ ನಿದ್ದೆಯಿಂದ ಎಚ್ಚರವಾಗಿತ್ತು. ಒಬ್ಬ ಪಾದಯಾತ್ರಿ ಮಲಗಿರೋ ಮಿತ್ಸುಟಾಕನನ್ನು ನೋಡಿ ಅವನು ಸತ್ತಿದ್ದಾನೆ ಎಂದುಕೊಂಡಿದ್ದ. ಆದರೆ ಹೃದಯ ಬಡಿತವಿತ್ತು. ದೇಹದ ಉಷ್ಣತೆಯು 22 ° Cಗೆ ಇಳಿದಿದ್ದರಿಂದ ಅನೇಕ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ.
ಅಷ್ಟಾದರೂ ಮಿತ್ಸುಟಾಕ ಸಾಯಲಿಲ್ಲ. 24 ದಿನಗಳ ಕಾಲ ಸಂಪೂರ್ಣ ಉಪವಾಸವಿದ್ದರೂ ಬದುಕಿ ಉಳಿದಿದ್ದಾನೆ. ಮಿತ್ಸುಟಾಕನನ್ನು ಜೀವಂತವಾಗಿ ನೋಡಿದ ವೈದ್ಯರು ಆಶ್ಚರ್ಯಚಕಿತರಾದರು. ತಜ್ಞರ ಪ್ರಕಾರ ವ್ಯಕ್ತಿಯ ಬದುಕುಳಿಯುವ ಪ್ರವೃತ್ತಿ 24 ದಿನಗಳವರೆಗೆ ಕೆಲಸ ಮಾಡುತ್ತಿತ್ತು. ಆತನ ದೇಹ ಹೈಬರ್ನೇಷನ್‌ಗೆ ಹೋಗಿತ್ತು. ದೇಹವು ಜೀವಂತವಾಗಿರಲು ಕಡಿಮೆ ಶಕ್ತಿಯನ್ನು ಬಳಸಿದೆ. ಹಾಗಾಗಿ ಆತ ಸಾಯಲಿಲ್ಲ. 2 ತಿಂಗಳ ಚಿಕಿತ್ಸೆಯ ನಂತರ ಮಿತ್ಸುಟಾಕ ಚೇತರಿಸಿಕೊಂಡಿದ್ದಾನೆ.