ಹರಿಯಾಣದ ಪಂಚಕುಲದ HDFC ಬ್ಯಾಂಕ್ ಸಿಬ್ಬಂದಿ ಮಾಡಿದ ಪ್ರಮಾದಕ್ಕೆ ಯುವಕನೊಬ್ಬ ರಾತ್ರೋರಾತ್ರಿ ಲಕ್ಷಾಧೀಶ್ವರನಾಗಿದ್ದಾನೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ಹಣ ಹಿಂದಿರುಗಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕೂಡ ಸ್ಪಂದನೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಆತನ ವಾಸ ಸ್ಥಳ ಪತ್ತೆಯಾಗಿದೆ.
ಪ್ರಕರಣದ ವಿವರ: ಪಂಚಕುಲದ ಈ ಯುವಕ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ತನ್ನ ಖಾತೆ ಹೊಂದಿದ್ದು, ಯುನೈಟೆಡ್ ಕಿಂಗ್ಡಮ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ. ಅಕ್ಟೋಬರ್ ತಿಂಗಳಿನಲ್ಲಿ ಬ್ಯಾಂಕಿನ ಸರ್ವರ್ ನಲ್ಲಿ ಉಂಟಾದ ದೋಷದಿಂದಾಗಿ ಈತನ ಖಾತೆಗೆ 21 ಲಕ್ಷ ರೂಪಾಯಿ ವರ್ಗಾವಣೆಯಾಗಿತ್ತು. ಬಳಿಕ ಇದು ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಹಣ ಹಿಂದಿರುಗಿಸುವಂತೆ ಯುವಕನಿಗೆ ಮನವಿ ಮಾಡಲಾಗಿತ್ತು.
ಆದರೆ ಅಷ್ಟರಲ್ಲಾಗಲೇ ಯುವಕ ಹಣ ಖರ್ಚು ಮಾಡಿಕೊಂಡಿದ್ದು, ಬ್ಯಾಂಕ್ ಸಿಬ್ಬಂದಿಯ ಮನವಿಗೆ ಕ್ಯಾರೇ ಅಂದಿರಲಿಲ್ಲ. ಈ ವಿಚಾರ ಕೆಲ ಸಿಬ್ಬಂದಿಗಳ ಉದ್ಯೋಗಕ್ಕೂ ಕುತ್ತು ತಂದಿತ್ತು. ಬಳಿಕ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದು, ತನಿಖೆ ವೇಳೆ ಯುವಕ ಯುನೈಟೆಡ್ ಕಿಂಗ್ಡಮ್ ನಲ್ಲಿ ವಾಸವಾಗಿರುವುದು ಬೆಳಕಿಗೆ ಬಂದಿದೆ. ಈತನ ತಂದೆ ಹಿಮಾಚಲ ಪ್ರದೇಶ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದು, ಮಗನಿಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರಂತೆ.
ಹೀಗಾಗಿ ಈಗ ಪೊಲೀಸರು ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಭಾರತೀಯ ದೂತವಾಸ ಕಚೇರಿಗೆ ಮಾಹಿತಿ ನೀಡಿ ಯುವಕನ ಕುರಿತ ವಿವರ ಕಲೆ ಹಾಕುತ್ತಿದ್ದಾರೆ. ಯುವಕ ಹಣ ಮರಳಿಸಿದರೆ ಸಾಕು ಎಂಬ ನಿಲುವಿನಲ್ಲಿ ಬ್ಯಾಂಕ್ ಸಿಬ್ಬಂದಿ ಇದ್ದು, ಒಂದು ವೇಳೆ ಹಣ ಬಾರದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.