
ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧ ಭೂಮಿಯಲ್ಲಿ ‘ಭದ್ರತಾ ಸಹಾಯಕ’ 23 ವರ್ಷದ ಭಾರತೀಯ ಪ್ರಜೆ ಕೊಲ್ಲಲ್ಪಟ್ಟರು ಎಂದು ವರದಿಯಾಗಿದೆ.
ರಷ್ಯಾದಲ್ಲಿ ಕೆಲವು ಭಾರತೀಯ ಯುವಕರು ಬೆಂಬಲ ಪತ್ರಗಳಿಗೆ ಸಹಿ ಹಾಕಿರುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒಪ್ಪಿಕೊಂಡ ಎರಡು ದಿನಗಳ ನಂತರ ಯುದ್ಧಭೂಮಿಯಲ್ಲಿ ಡ್ರೋನ್ ದಾಳಿಯಲ್ಲಿ 23 ವರ್ಷದ ಯುವಕ ಸಾವನ್ನಪ್ಪಿದ್ದಾನೆ.
ಹತ್ಯೆಗೀಡಾದ ಯುವಕ ಹೆಮಿಲ್ ಅಶ್ವಿನ್‌ಭಾಯ್ ಮಂಗುಕಿಯಾ ಗುಜರಾತ್‌ನ ಸೂರತ್‌ಗೆ ಸೇರಿದವರಾಗಿದ್ದು, ಫೆಬ್ರವರಿ 21 ರಂದು ರಷ್ಯಾದ ಗಡಿಯ ಸಮೀಪವಿರುವ ಡೊನೆಟ್ಸ್ಕ್ ನಲ್ಲಿ ಕೊಲ್ಲಲ್ಪಟ್ಟರು. ಆದರೆ, ಭಾರತೀಯ ಅಧಿಕಾರಿಗಳು ಖಚಿತಪಡಿಸಿಲ್ಲ.
ಈ ಹಿಂದೆ, ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಭಾರತೀಯ ಯುವಕರನ್ನು ಕೆಲವು ಏಜೆಂಟರು ನೇಮಕ ಮಾಡಿಕೊಂಡಿದ್ದಾರೆ. ಅವರನ್ನು ವಂಚಿಸಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಬಳಕೆ ಮಾಡಲಾಗಿದೆ ಎಂದು ಸಚಿವಾಲಯಕ್ಕೆ ತಿಳಿದಿದೆ ಎಂದು ಒಪ್ಪಿಕೊಂಡರು.
ಕೆಲವು ಭಾರತೀಯ ಪ್ರಜೆಗಳು ರಷ್ಯಾದ ಸೈನ್ಯದೊಂದಿಗೆ ಬೆಂಬಲ ಉದ್ಯೋಗಗಳಿಗೆ ಸಹಿ ಹಾಕಿದ್ದಾರೆ ಎಂದು ನಮಗೆ ತಿಳಿದಿದೆ. ಭಾರತೀಯ ರಾಯಭಾರ ಕಚೇರಿಯು ಯುವಕರ ಬಿಡುಗಡೆಗಾಗಿ ಸಂಬಂಧಿತ ರಷ್ಯಾದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆ. ಭಾರತೀಯ ಪ್ರಜೆಗಳು ಎಚ್ಚರಿಕೆ ವಹಿಸಲು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಹೈದರಾಬಾದಿನ ಮೊಹಮ್ಮದ್ ಸೂಫಿಯಾನ್ ಏಜೆಂಟರಿಂದ ವಂಚನೆಗೊಳಗಾದ ಮತ್ತು ಉಕ್ರೇನ್ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾ ಪರವಾಗಿ ಬಲವಂತವಾಗಿ ಹೋರಾಟಕ್ಕಿಳಿದ ಯುವಕರಲ್ಲಿ ಒಬ್ಬರು. ರಷ್ಯಾದಲ್ಲಿ ಸಿಲುಕಿರುವ ಯುವಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಮತ್ತು ಏಜೆಂಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಫಿಯಾನ್ ಕುಟುಂಬ ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸಿದೆ.
ಕಲಬುರಗಿಯ ಯುವಕರು ಕೂಡ ರಷ್ಯಾದಲ್ಲಿ ಸಿಲುಕಿದ್ದಾರೆ ಎನ್ನಲಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಎಂಐಎಂ ನಾಯಕ ಒವೈಸಿ ಅವರು ಭಾರತೀಯ ಯುವಕರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.